ನವದೆಹಲಿ: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.
ಬಕ್ರೀದ್ ಹಬ್ಬದ ಮುನ್ನಾದಿನದಂದು ತಮಿಳುನಾಡು ರಾಜ್ಯಾದ್ಯಂತ ಹಸು ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಇದರೊಂದಿಗೆ ತಮಿಳುನಾಡಿನಲ್ಲಿ ಸೃಷ್ಟಿಯಾಗಿದ್ದ ದೊಡ್ಡ ಆಡಳಿತಾತ್ಮಕ ಮತ್ತು ಕಾನೂನು ಗೊಂದಲಕ್ಕೆ ಸದ್ಯ ತೆರೆ ಬಿದ್ದಿದೆ.
ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ (SLP) ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿದರು.
ಹೈಕೋರ್ಟ್ ಆದೇಶವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘1958ರ ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ’ಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸರ್ಕಾರ ವಾದಿಸಿತು. ಈ ಕಾನೂನಿನ ಪ್ರಕಾರ, 10 ವರ್ಷಕ್ಕಿಂತ ಮೇಲ್ಪಟ್ಟ, ಕೃಷಿ ಕೆಲಸಕ್ಕೆ ಹಾಗೂ ಸಂತಾನೋತ್ಪತ್ತಿಗೆ ಅನರ್ಹವಾದ ಹಸುಗಳನ್ನು ಸಕ್ಷಮ ಪ್ರಾಧಿಕಾರದ ಪ್ರಮಾಣಪತ್ರ ಪಡೆದು ನಿರ್ದಿಷ್ಟ ಕಸಾಯಿಖಾನೆಗಳಲ್ಲಿ ವಧೆ ಮಾಡಲು ಅವಕಾಶವಿದೆ. ಶಾಸನಬದ್ಧ ಕಾನೂನು ಕೆಲವು ವಿನಾಯಿತಿಗಳನ್ನು ನೀಡಿರುವಾಗ, ಹೈಕೋರ್ಟ್ ಅದನ್ನೆಲ್ಲಾ ಮೀರಿ ‘ಸಂಪೂರ್ಣ ನಿಷೇಧ’ ಹೇರುವ ಮೂಲಕ ಶಾಸಕಾಂಗದ ಕೆಲಸವನ್ನು ತಾನೇ ಮಾಡಲು ಹೊರಟಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪಿಸಿತ್ತು.
ಹಿಂದೂ ಮಕ್ಕಳ್ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಎಂಬುವವರು ಕೊಯಮತ್ತೂರಿನಲ್ಲಿ ಬಕ್ರೀದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ತಡೆಯಲು ಮಾತ್ರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು.ಆದರೆ, ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮಿನಾರಾಯಣ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು, ಅರ್ಜಿದಾರರು ಕೇಳದಿದ್ದರೂ ಇಡೀ ರಾಜ್ಯಾದ್ಯಂತ ಅಧಿಕೃತ ಕಸಾಯಿಖಾನೆಗಳಲ್ಲೂ ಗೋಹತ್ಯೆ ಮಾಡಬಾರದು ಎಂದು ಆದೇಶದ ವ್ಯಾಪ್ತಿಯನ್ನು ವಿಸ್ತರಿಸಿತ್ತು. ಮತ್ತೊಂದು ಅಚ್ಚರಿಯೆಂದರೆ, ಹೈಕೋರ್ಟ್ ತನ್ನ ತೀರ್ಪಿನ ಒಂದು ಭಾಗದಲ್ಲಿ “ಗೊತ್ತುಪಡಿಸಿದ ಕಸಾಯಿಖಾನೆಗಳಲ್ಲಿ ಮಾತ್ರ ಪ್ರಾಣಿಗಳ ಹತ್ಯೆ ನಡೆಯಬಹುದು” ಎಂದು ಹೇಳುತ್ತಲೇ, ಮತ್ತೊಂದು ಭಾಗದಲ್ಲಿ “ಯಾವುದೇ ದಿನ ಹಸು ಅಥವಾ ಕರುವನ್ನು ವಧಿಸಬಾರದು” ಎಂದು ಹೇಳಿದೆ. ಇಂತಹ ಆಂತರಿಕ ವಿರೋಧಾಭಾಸಗಳ ಕಾರಣದಿಂದಲೇ ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿದೆ.

