ತಮಿಳುನಾಡು ರಾಜ್ಯದ ಸರ್ಕಾರಿ ಶಾಲೆಗಳು ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಿವೆ. ಇದಕ್ಕೆ ಕಾರಣವಾಗಿದ್ದು ಸರ್ಕಾರ ಜಾರಿಗೆ ತಂದ ‘ಹಸಿರು ಶಾಲಾ ಯೋಜನೆ’. ಈ ಯೋಜನೆಯ ಕುರಿತ ಅಧ್ಯಯನ ವರದಿ ಈಗ ಬಿಡುಗಡೆಯಾಗಿದ್ದು, ಯೋಜನೆಯನ್ನು ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ ಮಾಡಬೇಕು ಎಂಬ ಚಿಂತನೆ ಇದೆ.
ಅಧ್ಯಯನ ವರದಿಯು ತಮಿಳುನಾಡು ಸರ್ಕಾರದ ‘ಹಸಿರು ಶಾಲಾ ಯೋಜನೆ’ ಅನುಕೂಲಗಳನ್ನು ಪಟ್ಟಿ ಮಾಡಿದೆ. ಈ ಯೋಜನೆ ಎಲ್ಲಾ 45,000 ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ಬಂದರೆ ರಾಜ್ಯದ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳ ಒಟ್ಟು ವಿದ್ಯುತ್ ಬೇಡಿಕೆಯ ಶೇ 91ರಷ್ಟು ಸರಿದೂಗಿಸಲು ಅನುಕೂಲವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಈಗ ರಾಜ್ಯ ಸರ್ಕಾರ 300 ಹಸಿರು ಶಾಲೆಗಳಲ್ಲಿ ಹವಾಮಾನ ಶಿಕ್ಷಣ ಮತ್ತು ಕೂಲ್ ರೂಫ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆ ಕುರಿತ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಅಧ್ಯಯನದ ಪ್ರಕಾರ ಸೋಲಾರ್ ಮೇಲ್ಛಾವಣಿ ಅಳವಡಿಕೆ ಮಾಡುವ ಕ್ರಮ ಪ್ರತಿ ಶಾಲೆಗೆ ಸುಮಾರು 46 ಪ್ರತಿಶತದಷ್ಟು ಗ್ರಿಡ್ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದೆ.
ರಾಜ್ಯದ ಬೊಕ್ಕಸದ ಹೊರೆ ಕಡಿಮೆ: ಪ್ರತಿ ಶಾಲೆಯು ಪ್ರಸ್ತುತ ಸುಮಾರು 3,572 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ವಾರ್ಷಿಕ ಸುಮಾರು 26,000 ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ತಮಿಳುನಾಡಿನ ಎಲ್ಲಾ 45,000 ಸರ್ಕಾರಿ ಶಾಲೆಗಳಿಗೆ ಯೋಜನೆ ವಿಸ್ತರಣೆ ಮಾಡಿದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೇಗೆ ಅನುಕೂಲವಾಗಲಿದೆ ಎಂದು ವರದಿ ವಿವರಿಸಿದೆ.
ಶಾಲೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪನೆ ಮಾಡುವುದು ಮತ್ತು ಅದಕ್ಕೆ ಸಂಬಂಧಿತ ಮೂಲಸೌಕರ್ಯಗಳಿಗೆ ಅಗತ್ಯವಾದ ಬಂಡವಾಳ ಹೂಡಿಕೆಯು ಹೆಚ್ಚಾಗಲಿದೆ. ಯೋಜನೆಯಿಂದ ರಾಜ್ಯ ಸರ್ಕಾರದಿಂದ ವಿಪತ್ತು ಎಂದು ಗುರುತಿಸಲಾಗಿರುವ ತೀವ್ರವಾದ ಶಾಖದಿಂದ ಉಂಟಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಬಹುದು ಎಂದು ವರದಿ ಹೇಳಿದೆ.
ಕಾಂಕ್ರೀಟ್ ಮೇಲ್ಛಾವಣೆ ಹೊಂದಿರುವ ತರಗತಿಯ ಕೊಠಡಿಗಳು ಸಾಮಾನ್ಯವಾಗಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೇಸಿಗೆಯ ಸಮಯದಲ್ಲಿ ಶಾಲಾ ತರಗತಿಗೆ ಹಾಜರಾತಿ ಸಹ ಕುಸಿಯುತ್ತದೆ. ಸಹ ಹಸಿರು ಶಾಲಾ ಯೋಜನೆಯಡಿ ಸೌರ ಫಲಕ ಅಳವಡಿಕೆ ಮಾಡಿದರೆ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ.
ಅಂಬತ್ತೂರು ಎಂಬಲ್ಲಿ ಪ್ರಾಯೋಗಿಕವಾಗಿ ನಡೆಸಲಾದ ಕೂಲ್ ರೂಫ್ ತರಗತಿಯು ತಾಪಮಾನವನ್ನು 3-4 ಡಿಗ್ರಿ ಸೆಲ್ಸಿಯಸ್ ಮತ್ತು ಸೀಲಿಂಗ್ ಮೇಲ್ಮೈ ತಾಪಮಾನವನ್ನು 5 ಡಿಗ್ರಿ ಸೆಲ್ಸಿಯಸ್ ವರೆಗೆ ಕಡಿಮೆ ಮಾಡಿದೆ. ಇದು ವಿದ್ಯಾರ್ಥಿಗಳ ಗಮನ ಮತ್ತು ಕಲಿಕೆಯ ಫಲಿತಾಂಶಗಳ ಮೇಲೆ ಸಹ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ವರದಿ ತಿಳಿಸಿದೆ.
ಹಸಿರು ಶಾಲಾ ಯೋಜನೆಯಡಿ ಕೇವಲ ಸೌರ ಫಲಕಗಳನ್ನು ಅಳವಡಿಕೆ ಮಾಡುತ್ತಿಲ್ಲ. ಮಳೆನೀರು ಕೊಯ್ಲು, ಹನಿ ನೀರಾವರಿ ವ್ಯವಸ್ಥೆ, ಸುಧಾರಿತ ತ್ಯಾಜ್ಯ ನಿರ್ವಹಣೆ ಮುಂತಾದ ಕ್ರಮಗಳ ಮೂಲಕ ಶಾಲಾ ಆವರಣದ ಉದ್ಯಾನವನಗಳಿಗೆ ಅನುಕೂಲವನ್ನು ಮಾಡಿಕೊಡಲಾಗುತ್ತಿದೆ.
ಶಾಲೆಗಳ ಹವಾಮಾನ ಬದಲಾವಣೆ ಸಾಕ್ಷರತೆಯನ್ನು ಉತ್ತೇಜಿಸುತ್ತದೆ. ಎಲ್ಲಾ 38 ಜಿಲ್ಲೆಗಳ 4,000 ಶಿಕ್ಷಕರಿಗೆ ಹವಾಮಾನ ರಾಯಭಾರಿ ಸ್ವಯಂ ಸೇವಕ ತರಬೇತಿ ನೀಡಲಾಗಿದೆ. ಈ ಯೋಜನೆಗೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಬೆಂಬಲವು ಸಿಕ್ಕಿದೆ. ಸ್ವಿಸ್ ಏಜೆನ್ಸಿ ಫಾರ್ ಡೆವಲಪ್ಮೆಂಟ್ ಅಂಡ್ ಕೋಆಪರೇಷನ್ ಅನುದಾನವನ್ನು ನೀಡಿದೆ.
ಈಗಾಗಲೇ ಇನ್ನೂ 100 ಶಾಲೆಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ತರಗತಿಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಬೋಧನೆ ಮಾಡುವುದು ಮಾತ್ರವಲ್ಲ, ಶಾಲೆಯ ಪರಿಸರ ಸಹ ಅದಕ್ಕೆ ಪೂರಕವಾಗಿದ್ದರೆ ಅನುಕೂಲವಾಗುತ್ತದೆ ಎಂದು ವರದಿ ಹೇಳಿದೆ.

