HomeIndiaತಮಿಳುನಾಡು ಚುನಾವಣೆ: ಎನ್‌ಡಿಎ ಸೀಟು ಹಂಚಿಕೆ ಫೈನಲ್, ಬಿಜೆಪಿಗೆ ಎಷ್ಟು ಸೀಟು?

ತಮಿಳುನಾಡು ಚುನಾವಣೆ: ಎನ್‌ಡಿಎ ಸೀಟು ಹಂಚಿಕೆ ಫೈನಲ್, ಬಿಜೆಪಿಗೆ ಎಷ್ಟು ಸೀಟು?

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ವೇಳಾಪಟ್ಟಿ ಘೋಷಣೆಯಾಗಿದೆ. ರಾಜ್ಯದ 234 ಸ್ಥಾನಗಳಿಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಎಸ್‌ಪಿಎ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ನಟ ವಿಜಯ್ ಸ್ಥಾಪಿಸಿರುವ ಟಿವಿಕೆ ಪಕ್ಷಗಳು ನೇರ ಎದುರಾಳಿಗಳು.

ಬಿಜೆಪಿ-ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಅಂತಿಮಗೊಳಿಸಿವೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೀಟು ಹಂಚಿಕೆ ಅಂತಿಮಗೊಳಿಸಿದ್ದಾರೆ.

ಎಐಎಡಿಎಂಕೆಯು ಮಿತ್ರಪಕ್ಷಗಳಾದ ಬಿಜೆಪಿ, ಪಿಎಂಕೆ, ಎಎಂಎಂಕೆಗೆ ಒಟ್ಟು 56 ಸೀಟುಗಳನ್ನು ಹಂಚಿಕೆ ಮಾಡಿದೆ. ಇದರಲ್ಲಿ ಬಿಜೆಪಿಗೆ 27, ಪಿಎಂಕೆ 18 ಮತ್ತು ಎಎಂಎಂಕೆ 11 ಸ್ಥಾನಗಳನ್ನು ಪಡೆದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಎಐಎಡಿಎಂಕೆಯು ಎಷ್ಟು ಸೀಟುಗಳಲ್ಲಿ ಕಣಕ್ಕಿಳಿಯಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಕುರಿತು ಮಾತನಾಡಿದ ಎಡಪ್ಪಾಡಿ ಕೆ.ಪಳನಿಸ್ವಾಮಿ, “ಮೈತ್ರಿಕೂಟದ ಇತರ ಪಕ್ಷಗಳ ಜೊತೆ ಮಾತುಕತೆ ನಡೆಯುತ್ತಿದೆ” ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಜಿ.ಕೆ.ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್ ಮತ್ತು ಐಜೆಕೆ ಪಕ್ಷಗಳು ಹೊಸದಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿವೆ. ಈ ಪಕ್ಷಗಳಿಗೆ ಸೀಟು ಹಂಚಿಕೆ ಮಾಡಿದ ಬಳಿಕ ಎಐಎಡಿಎಂಕೆಯು ತನ್ನ ಸೀಟುಗಳನ್ನು ಘೋಷಣೆ ಮಾಡಲಿದೆ.

ಎಡಪ್ಪಾಡಿ ಕೆ.ಪಳನಿಸ್ವಾಮಿ ಎನ್‌ಡಿಎ ಒಕ್ಕೂಟವನ್ನು ವಿಜಯದ ಮೈತ್ರಿ ಎಂದು ಕರೆದಿದ್ದು, ಎಲ್ಲಾ ಸ್ಥಾನಗಳಲ್ಲಿಯೂ ಜಯಗಳಿಸುವ ಮೂಲಕ ಎಐಎಡಿಎಂಕೆ ಸರ್ಕಾರವನ್ನು ರಚಿಸಲಿದೆ ಎಂದು ಪ್ರತಿಪಾದಿಸಿದ್ದಾರೆ.

ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ: ತಮಿಳುನಾಡು ರಾಜ್ಯದ ಹಾಲಿ ಆಡಳಿತ ಪಕ್ಷ ಡಿಎಂಕೆ. ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ. ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ಹೊರತುಪಡಿಸಿ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ನಲ್ಲಿ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ವಿಸಿಕೆ ಸೇರಿದಂತೆ 22 ಪಕ್ಷಗಳಿವೆ.

ಎಂ.ಕೆ.ಸ್ಟಾಲಿನ್ ಅವರೇ ಎಲ್ಲಾ ಮೈತ್ರಿಪಕ್ಷಗಳ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಸಿ ಫೈನಲ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ 27 ಸೀಟು ಎಂದು ಫೈನಲ್ ಮಾಡಲಾಗಿದೆ. ಇನ್ನೂ ಒಂದು ಸೀಟು ನೀಡುವುದಕ್ಕೂ ಒಪ್ಪಿಗೆ ನೀಡಲಾಗಿದೆ.

ಡಿಎಂಕೆ-ಕಾಂಗ್ರೆಸ್ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಕ್ಕೆ ಈ ಬಾರಿ ನಟ ವಿಜಯ್ ಸ್ಥಾಪನೆ ಮಾಡಿರುವ ಟಿವಿಕೆ ಪಕ್ಷ ಎದುರಾಳಿಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬರುವ ಭರವಸೆ ಹೊಂದಿದೆ.

ತಮಿಳುನಾಡು ಬಿಜೆಪಿ ಉಸ್ತುವಾರಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, “ಮಹಾರಾಷ್ಟ್ರ, ಹರ್ಯಾಣ, ಬಿಹಾರ ಮತ್ತು ದೆಹಲಿಯ ಮತದಾರರು ಇಂಡಿಯಾ ಮೈತ್ರಿಕೂಟವನ್ನು ತಿರಸ್ಕರಿಸಿದಂತೆಯೇ, ತಮಿಳುನಾಡಿನ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಯನ್ನು ತಿರಸ್ಕರಿಸಲಿದ್ದಾರೆ” ಎಂದರು.

“ತಮಿಳುನಾಡಿನ ಆರ್ಥಿಕತೆಯನ್ನು ಅಸಮರ್ಥವಾಗಿ ನಿರ್ವಹಿಸಿ ಮತ್ತು ತಮಿಳು ಸಂಸ್ಕೃತಿಗೆ ಧಕ್ಕೆ ತರುವಂತಹ ಕ್ರಮಗಳ ಮೂಲಕ ರಾಜ್ಯವನ್ನು ಅತ್ಯಂತ ಕಷ್ಟದ ಕಾಲಕ್ಕೆ ತಳ್ಳಿರುವ ದುಷ್ಟ ಶಕ್ತಿ ಡಿಎಂಕೆ ಮತ್ತು ಅದರ ಪಾಲುದಾರರ ವಿರುದ್ಧ ನಾವು ಹೋರಾಟವನ್ನು ಪ್ರಾರಂಭಿಸುತ್ತೇವೆ. ಡಿಎಂಕೆ ಮತ್ತು ಕಾಂಗ್ರೆಸ್‌ನಿಂದ ಜನರು ಬೇಸತ್ತಿದ್ದಾರೆ” ಎಂದು ತಿಳಿಸಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular