ತಮಿಳುನಾಡು ವಿಧಾನಸಭೆ ಚುನಾವಣೆ 2026ಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಿಎಂ ದಿ. ಜೆ.ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಚುನಾವಣಾ ತಯಾರಿ ಆರಂಭಿವಾಗಿದ್ದು, 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ.
ದಿ.ಜಯಲಲಿತಾ ಅವರ ಜನ್ಮದಿನಾಚರಣೆ ಅಂಗವಾಗಿ ಕಮುದಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿ.ಕೆ.ಶಶಿಕಲಾ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದರು, ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದರು.
ದಿ.ಜಯಲಲಿತಾ ಮುಖ್ಯಸ್ಥರಾಗಿದ್ದ ಎಐಎಡಿಎಂಕೆ ಪಕ್ಷದಲ್ಲಿ ಹಲವಾರು ಗೊಂದಲಗಳಿವೆ. ವಿ.ಕೆ.ಶಶಿಕಲಾ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದ ಬಳಿಕ ಅವರು ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ.
ವಿ.ಕೆ.ಶಶಿಕಲಾ ಮಾತನಾಡಿ, “ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಲಾಗುವುದು ಮತ್ತು ಅದರ ಹೆಸರನ್ನು ಶೀಘ್ರವೇ ಘೋಷಣೆ ಮಾಡಲಾಗುವುದು” ಎಂದು ಹೇಳಿದರು.
“ನಾವು ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೇವೆ. ಹೊಸ ಪಕ್ಷದ ಹೆಸರು ಶೀಘ್ರವೇ ಘೋಷಣೆ ಮಾಡುತ್ತೇವೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ವಿರೋಧಿಗಳನ್ನು ಮತ್ತು ನಮಗೆ ದ್ರೋಹ ಮಾಡಿದವರನ್ನು ಸೋಲಿಸುವುದು ನಮ್ಮ ಗುರಿ” ಎಂದು ಘೋಷಣೆ ಮಾಡಿದರು.
ಸದ್ಯ ಎಐಎಡಿಎಂಕೆ ಪಕ್ಷದ ಮುಖ್ಯಸ್ಥರು ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ. ಆದರೆ ವಿ.ಕೆ.ಶಶಿಕಲಾ, “ತಾವು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಎಡಪ್ಪಾಡಿ ಕೆ. ಪಳನಿಸ್ವಾಮಿ ತಮಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಎಡಪ್ಪಾಡಿ ಕೆ. ಪಳನಿಸ್ವಾಮಿ, ಓ ಪನ್ನೀರ್ ಸೆಲ್ವಂ ಎಲ್ಲರಿಂದಲೂ ವಿ.ಕೆ.ಶಶಿಕಲಾ ದೂರವಾಗಿದ್ದಾರೆ. ಎಐಎಡಿಎಂಕೆ ಪಕ್ಷ ಅವರನ್ನು ಉಚ್ಚಾಟನೆಗೊಳಿಸಿ ಆದೇಶವನ್ನು ಹೊರಡಿಸಿದೆ.
ಶಶಿಕಲಾ ಅವರು 2027ರ ತನಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಆದರೆ ಹೊಸ ಪಕ್ಷ ಸ್ಥಾಪನೆ ಮಾಡುವ ಅವರು ತಮ್ಮ ಬೆಂಬಲಿಗರನ್ನು ಕೆಲವು ವಿಧಾನಸಭಾ ಸ್ಥಾನಗಳಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆಪ್ತ ಸ್ನೇಹಿತೆ ಮತ್ತು ಸಲಹೆಗಾರ್ತಿಯಾಗಿದ್ದ ವಿ.ಕೆ.ಶಶಿಕಲಾ ಮೂರು ದಶಕಗಳ ಕಾಲ ಎಐಎಡಿಎಂಕೆ ಪಕ್ಷವನ್ನು ನಿಯಂತ್ರಿಸಿದ್ದರು. ಆದರೆ ಅವರು 2021ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಯಾವುದೇ ಹಿರಿಯ ನಾಯಕರು ಅವರನ್ನು ಬೆಂಬಲಿಸದ ಕಾರಣ ಪಕ್ಷದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ.
ಈಗ ಸಂಪೂರ್ಣ ಎಐಎಡಿಎಂಕೆ ಪಕ್ಷ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಿಡಿತದಲ್ಲಿದೆ. ಅಲ್ಲದೇ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಮರು ಸೇರ್ಪಡೆಯಾಗುವ ಮೂಲಕ ಚುನಾವಣಾ ತಯಾರಿಯಲ್ಲಿದ್ದಾರೆ.
ಎಐಎಡಿಎಂಕೆ ಪಕ್ಷ ವಿ.ಕೆ.ಶಶಿಕಲಾ, ಎಡಪ್ಪಾಡಿ ಕೆ. ಪಳನಿಸ್ವಾಮಿ, ಓ ಪನ್ನೀರ್ ಸೆಲ್ವಂ ಎಂದು ಬಣವಾಗಿ ವಿಭಾಗವಾಗಿದ್ದು, ಪಕ್ಷದ ಕಾರ್ಯಕರ್ತರು, ನಾಯಕರಲ್ಲಿ ಭಾರೀ ಗೊಂದಲವಿದೆ.
ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ, ಡಿಎಂಕೆ ಮತ್ತು ಕಾಂಗ್ರೆಸ್, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಗಳ ನಡುವೆ ನೇರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಇಂತಹ ಹೊತ್ತಿನಲ್ಲಿಯೇ ವಿ.ಕೆ.ಶಶಿಕಲಾ ಹೊಸ ಪಕ್ಷ ಘೋಷಣೆ ಮಾಡುವ ಮೂಲಕ ರಾಜ್ಯ ರಾಜಕೀಯದ ಚಿತ್ರಣ ಬದಲಿಸಲು ಹೊರಟಿದ್ದಾರೆ.

