ತಮಿಳುನಾಡು ವಿಧಾನಸಭಾ ಚುನಾವಣೆ 2026ರ ತಯಾರಿ ನಡೆಯುತ್ತಿದೆ. ರಾಜ್ಯದ 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್‌ನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗಲಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ. ಡಿಎಂಕೆ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ದ ಮುಖ್ಯಪಕ್ಷ. ಈಗ ಮುಂದಿನ ಚುನಾವಣೆಗಾಗಿ ಡಿಎಂಕೆ ಸೀಟು ಹಂಚಿಕೆ ಮಾತುಕತೆ ಆರಂಭಿಸಿದೆ.
ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಸೀಟು ಹಂಚಿಕೆ ಬಗ್ಗೆ ಹಗ್ಗಜಗ್ಗಾಟ ನಡೆಯುತ್ತಿದೆ. ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಎಂ.ಕೆ.ಸ್ಟಾಲಿನ್ ಭೇಟಿಯಾಗಿ ಪಕ್ಷದ ಸೀಟು ಹಂಚಿಕೆ ಬೇಡಿಕೆ ಮಂಡಿಸಿದ್ದರು.
ಮೂಲಗಳ ಮಾಹಿತಿ ಪ್ರಕಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೀಟು ಹಂಚಿಕೆ ಕುರಿತು ಎಂ.ಕೆ.ಸ್ಟಾಲಿನ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಬೇಡಿಕೆಗಳನ್ನು ಪಟ್ಟಿ ಮಾಡಲಾಗಿದ್ದು, ಕಾಂಗ್ರೆಸ್ ನಿಯೋಗವು ಆ ಪತ್ರವನ್ನು ಎಂ.ಕೆ.ಸ್ಟಾಲಿನ್ ಅವರಿಗೆ ಹಸ್ತಾಂತರಿಸಿದೆ.
25+1 ಸೂತ್ರ ಮುಂದಿಟ್ಟ ಡಿಎಂಕೆ: ಹೆಚ್ಚಿನ ಸೀಟು, ಅಧಿಕಾರ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮೊದಲು ರಾಜ್ಯ ಕಾಂಗ್ರೆಸ್ ನಾಯಕರು ಡಿಎಂಕೆ ಮುಂದಿಟ್ಟಿದ್ದರು. ಆದರೆ ಈಗ ಸೋನಿಯಾ ಗಾಂಧಿ ಬರೆದ ಪತ್ರದಲ್ಲಿ ಏನಿದೆ? ಎಂಬುದು ಇನ್ನೂ ಸಹ ನಿಗೂಢವಾಗಿದೆ.
ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಪಕ್ಷ 30ಕ್ಕೂ ಹೆಚ್ಚು ಸೀಟುಗಳನ್ನು ನಿರೀಕ್ಷಿಸುತ್ತಿದೆ. ಆದರೆ ಡಿಎಂಕೆ 25 ವಿಧಾನಸಭಾ ಸ್ಥಾನಗಳು ಮತ್ತು 1 ರಾಜ್ಯಸಭಾ ಸ್ಥಾನಕ್ಕಿಂತ ಹೆಚ್ಚು ನೀಡಲು ಸಿದ್ಧವಿಲ್ಲ.
ಡಿಎಂಕೆ ಮೂಲಗಳ ಮಾಹಿತಿ ಪ್ರಕಾರ 25+1 ಸೀಟು ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದೆ ಪಕ್ಷ ಇಟ್ಟಿದೆ. ತಮಿಳುನಾಡಿನ ಪ್ರತಿ ಲೋಕಸಭಾ ಕ್ಷೇತ್ರಕ್ಕೆ 1 (ಒಟ್ಟು 39) ವಿಧಾನಸಭಾ ಸ್ಥಾನಗಳನ್ನು ನೀಡಬೇಕು ಎಂಬುದು ಕಾಂಗ್ರೆಸ್‌ನ ಮೂಲ ಬೇಡಿಕೆಯಾಗಿತ್ತು.
ಈಗ ಕಾಂಗ್ರೆಸ್ ತನ್ನ ಸೀಟು ಹಂಚಿಕೆ ಬೇಡಿಕೆಯನ್ನು ಕಡಿಮೆ ಮಾಡಿಕೊಂಡಿದೆ. ಆದರೆ 30ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂದು ನಾಯಕರು ಪ್ರಯತ್ನ ಮುಂದುವರೆಸಿದ್ದಾರೆ. ಆದರೆ ಇದಕ್ಕೆ ಡಿಎಂಕೆ ಒಪ್ಪಿಗೆ ನೀಡಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಪ್ರಕಾರ, “ಮಾತುಕತೆಯ ಭಾಗವಾಗಿ ಪಕ್ಷದ ಹೈಕಮಾಂಡ್ 41 ಸ್ಥಾನಗಳು, ಸ್ಥಳೀಯ ಸಂಸ್ಥೆಗಳಲ್ಲಿ ಶೇ. 25ರಷ್ಟು ಪ್ರಾತಿನಿಧ್ಯ ಮತ್ತು ದೇವಸ್ಥಾನ ಮಂಡಳಿಗಳಲ್ಲಿ ಟ್ರಸ್ಟಿಗಳಾಗಿ ನೇಮಕ ಮಾಡುವಂತೆ ಒತ್ತಾಯಿಸಿದೆ”
“ಚುನಾವಣೆ ನಂತರ ಸರ್ಕಾರ ರಚನೆಯ ಸಂದರ್ಭದಲ್ಲಿ ತನ್ನ ಪ್ರತಿನಿಧಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಬೇಡಿಕೆ ಇಟ್ಟಿದ್ದು, ಡಿಎಂಕೆಯಿಂದ ಉತ್ತರದ ನಿರೀಕ್ಷೆಯಲ್ಲಿದೆ. ಅಲ್ಲದೇ ಪಕ್ಷವು 2 ರಾಜ್ಯಸಭಾ ಸ್ಥಾನಗಳನ್ನು ಕೇಳಿದೆ”.
ಡಿಎಂಕೆ ನೇತೃತ್ವದ ಎಸ್‌ಪಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ (CPI-M) ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಮತ್ತು ವಿಡುದಲೈ ಚಿರುತ್ತೈಗಳ್ ಕಚ್ಚಿ (VCK) ಪಕ್ಷಗಳಿವೆ. ಹೆಚ್ಚಿನ ಸೀಟುಗಳು ಕಾಂಗ್ರೆಸ್‌ಗೆ ಸಿಗಲಿವೆ.

