ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದ ನಾಲ್ಕನೇ ಪಂದ್ಯ ನಡೆದಿದ್ದು, ವೆಸ್ಟ್ ಇಂಡೀಸ್ ಜಿಂಬಾಬ್ವೆ ವಿರುದ್ಧ ಬರೋಬ್ಬರಿ 107 ರನ್‌ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ವಿಂಡೀಸ್ ಶಿಮ್ರಾನ್ ಹೆಟ್ಮೈರ್ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿ ಜಿಂಬಾಬ್ವೆಗೆ 255 ರನ್‌ಗಳ ಅತಿ ಕಠಿಣ ಗುರಿಯನ್ನು ನೀಡಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಜಿಂಬಾಬ್ವೆ 17.4 ಓವರ್‌ಗಳಲ್ಲಿ 147 ರನ್‌ಗೆ ಆಲ್‌ಔಟ್ ಆಗಿದೆ.
ಈ ಗೆಲುವಿನೊಂದಿಗೆ ಗ್ರೂಪ್ ಒಂದರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ರನ್ ಮಳೆ ಸುರಿಸುವುದು ಮಾತ್ರವಲ್ಲದೇ ನೆಟ್ ರನ್‌ರೇಟ್ ಸುರಿಮಳೆಯನ್ನೂ ಮಾಡಿದೆ. ಸದ್ಯ ವಿಂಡೀಸ್ 5.350 ನೆಟ್ ರನ್‌ರೇಟ್ ಹೊಂದಿದೆ.
ವೆಸ್ಟ್ ಇಂಡೀಸ್ ಇನ್ನಿಂಗ್ಸ್: ತಂಡ 54 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಸಾಮಾನ್ಯ ಆರಂಭ ಪಡೆದುಕೊಂಡರೂ ಸಹ ಮೂರನೇ ವಿಕೆಟ್‌ಗೆ ಜತೆಯಾದ ಶಿಮ್ರಾನ್ ಹೆಟ್ಮೈರ್ ಹಾಗೂ ರೊವ್‌ಮನ್ ಪೊವೆಲ್ ಅಬ್ಬರದ ಶತಕದ ಜತೆಯಾಟದ ಸಹಾಯದಿಂದ ಪುಟಿದೆದ್ದು ಅಬ್ಬರಿಸಿತು. ಹೆಟ್ಮೈರ್ 34 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 85 ರನ್ ಚಚ್ಚಿದರೆ, ಪೊವೆಲ್ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 59 ರನ್ ಬಾರಿಸಿದರು. ಇನ್ನುಳಿದಂತೆ ರೊಮಾರಿಯೊ ಶೆಫರ್ಡ್ 21, ಜೇಸನ್ ಹೋಲ್ಡರ್ 13, ಮ್ಯಾಥ್ಯೂ ಫೋರ್ಡ್ ಅಜೇಯ 1 ರನ್ ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಶೆರ್ಫೇನ್ ರುದರ್‌ಫೋರ್ಡ್ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸಿದರು.
ಜಿಂಬಾಬ್ವೆ ಪರ ರಿಚರ್ಡ್ ಎನ್‌ಗರಾವ ಹಾಗೂ ಬ್ಲೆಸಿಂಗ್ ಮುಜರಬಾನಿ ತಲಾ ಎರಡು ವಿಕೆಟ್ ಪಡೆದರೆ, ಬ್ರಾಡ್ ಎವನ್ಸ್ ಹಾಗೂ ಗ್ರೇಮ್ ಕ್ರೆಮರ್ ತಲಾ ಒಂದೊಂದು ವಿಕೆಟ್ ಪಡೆದರು.
ಜಿಂಬಾಬ್ವೆ ಇನ್ನಿಂಗ್ಸ್: ತಂಡದ ಪರ ಯಾವೊಬ್ಬ ಆಟಗಾರನೂ ಹೆಚ್ಚು ಹೊತ್ತು ಕಣದಲ್ಲಿ ಉಳಿಯಲಿಲ್ಲ. 20 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡ ಜಿಂಬಾಬ್ವೆ ಅಷ್ಟೇ ಮೊತ್ತಕ್ಕೆ ಮತ್ತೆರಡು ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತು. ಅಲ್ಲಿಗೆ ಬೃಹತ್ ಬೆನ್ನಟ್ಟಬೇಕು ಎಂಬ ಜಿಂಬಾಬ್ವೆ ಆಸೆ ನುಚ್ಚು ನೂರಾಗಿತ್ತು. ಬಳಿಕ ಕಣಕ್ಕಿಳಿದ ಅಟಗಾರರು ಸಹ ದಿಟ್ಟ ಹೋರಾಟ ನಡೆಸದೇ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಮಾರುಮಾನಿ 14, ಬ್ರಿಯಾನ್ ಬೆನೆಟ್ 5, ಡಿಯಾನ್ ಮೇಯರ್ಸ್ 28, ರಯಾನ್ ಬರ್ಲ್ ಡಕ್‌ಔಟ್, ಸಿಕಂದರ್ ರಾಜಾ 27, ಟೋನಿ ಮುನ್ಯೊಂಗ 14, ತಶಿಂಗ ಮುಸೆಕಿವ ಡಕ್‌ಔಟ್, ಗ್ರೇಮ್ ಕ್ರೆಮೆರ್ ಡಕ್‌ಔಟ್, ಬ್ಲೆಸಿಂಗ್ ಮುಜರಬಾನಿ ಡಕ್‌ಔಟ್, ಅಂತಿಮ ಹಂತದಲ್ಲಿ ಅಬ್ಬರಿಸಿದ ಬ್ರಾಡ್ ಎವನ್ಸ್ 21 ಎಸೆತಗಳಲ್ಲಿ 43 ರನ್ ಹಾಗೂ ರಿಚರ್ಡ್ ಎನ್‌ಗರವ ಅಜೇಯ 7 ರನ್ ಬಾರಿಸಿದರು.
ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಟಿ ನಾಲ್ಕು ವಿಕೆಟ್, ಅಕೇಲ್ ಹೊಸೈನ್ ಮೂರು ವಿಕೆಟ್, ಮ್ಯಾಥ್ಯೂ ಫೋರ್ಡ್ ಎರಡು ವಿಕೆಟ್ ಹಾಗೂ ಜೇಸನ್ ಹೋಲ್ಡರ್ ಒಂದು ವಿಕೆಟ್ ಪಡೆದರು.

