HomeLatest NewsT20 World Cup 2026: ಮಾರ್ಕ್ರಮ್ ಮಾಸ್ ಇನ್ನಿಂಗ್ಸ್; ದಕ್ಷಿಣ ಆಫ್ರಿಕಾ ಅಬ್ಬರಕ್ಕೆ ವಿಂಡೀಸ್ ತತ್ತರ

T20 World Cup 2026: ಮಾರ್ಕ್ರಮ್ ಮಾಸ್ ಇನ್ನಿಂಗ್ಸ್; ದಕ್ಷಿಣ ಆಫ್ರಿಕಾ ಅಬ್ಬರಕ್ಕೆ ವಿಂಡೀಸ್ ತತ್ತರ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್‌ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿತು. ಅದರಂತೆ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿ ದಕ್ಷಿಣ ಆಫ್ರಿಕಾಗೆ 177 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿದೆ.

ವಿಂಡೀಸ್ ಇನ್ನಿಂಗ್ಸ್: ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ ಹಾಗೂ ಶಾಯ್ ಹೋಪ್ ಮೊದಲ ಓವರ್‌ನಲ್ಲೇ 17 ರನ್ ಬಾರಿಸಿ ಒಳ್ಳೆಯ ಆರಂಭ ಕಟ್ಟಿಕೊಟ್ಟರು. ಆದರೆ ಮೂರನೇ ಓವರ್‌ನಲ್ಲಿ ಹೋಪ್ ಹಾಗೂ ಆಗಷ್ಟೇ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ ವಿಕೆಟ್ ಒಪ್ಪಿಸಿದ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತು. ಶಾಯ್ ಹೋಪ್ 16 ರನ್ ಬಾರಿಸಿದರೆ, ಹೆಟ್ಮಾಯೆರ್ 2 ರನ್ ಕಲೆಹಾಕಿದರು. ಬೆನ್ನಲ್ಲೇ ಬ್ರಾಂಡನ್ ಕಿಂಗ್ 21, ರಾಸ್ಟನ್ ಚೇಸ್ 2, ರೊವ್‌ಮನ್ ಪೊವೆಲ್ 9, ಮ್ಯಾಥ್ಯೂ ಫೋರ್ಡ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಹೀಗೆ ಕೇವಲ 10.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಿದ್ದ ವೆಸ್ಟ್ ಇಂಡೀಸ್ ಅಲ್ಪಮೊತ್ತಕ್ಕೆ ತನ್ನ ಇನ್ನಿಂಗ್ಸ್ ಮುಗಿಸಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಎಂಟನೇ ವಿಕೆಟ್‌ಗೆ ಜತೆಯಾದ ಜೇಸನ್ ಹೋಲ್ಡರ್ ಹಾಗೂ ರೊಮಾರಿಯೊ ಶೆಫರ್ಡ್ ಕೊನೆಯ ಓವರ್‌ವರೆಗೂ ಜವಾಬ್ದಾರಿಯುತ ಆಟವನ್ನಾಡಿ ಅಂತಿಮ ಹಂತದಲ್ಲಿ ಅಬ್ಬರಿಸಿ 57 ಎಸೆತಗಳಲ್ಲಿ 89 ರನ್ ಜತೆಯಾಟ ಕಟ್ಟಿಕೊಟ್ಟು ತಂಡವನ್ನು ಭಾರೀ ಕುಸಿತದಿಂದ ಪಾರು ಮಾಡಿದರು. ಕೊನೆಯ ಎರಡು ಓವರ್‌ ಹೆಚ್ಚು ರನ್ ಹರಿದುಬರದಿದ್ದರೂ ಸಹ ತಂಡದ ಮೊತ್ತ 170+ ದಾಟುವ ಮಟ್ಟಕ್ಕೆ ಅಬ್ಬರಿಸಿದರು. ಜೇಸನ್ ಹೋಲ್ಡರ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 49 ರನ್ ಬಾರಿಸಿದರೆ, ರೊಮಾರಿಯೊ ಶೆಫರ್ಡ್ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸಿದರು ಹಾಗೂ ಯಾವುದೇ ರನ್ ಗಳಿಸದ ಗುಡಕೇಶ್ ಮೋಟಿ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ ಮೂರು ವಿಕೆಟ್, ಕಗಿಸೊ ರಬಾಡಾ ಹಾಗೂ ಕಾರ್ಬಿನ್ ಬಾಷ್ ತಲಾ ಎರಡು ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ವೆಸ್ಟ್ ಇಂಡೀಸ್ ನೀಡಿದ ಗುರಿಯನ್ನು ಸರಾಗವಾಗಿ ಬೆನ್ನಟ್ಟಿದ ಹರಿಣಗಳು ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ವೆಸ್ಟ್ ಇಂಡೀಸ್ ಬೌಲರ್‌ಗಳು ಕ್ವಿಂಟನ್ ಡಿ ಕಾಕ್ ವಿಕೆಟ್ ಮಾತ್ರ ಕಬಳಿಸುವಲ್ಲಿ ಯಶಸ್ವಿಯಾಗಿದ್ದು, ಮಾರ್ಕ್ರಮ್ ಮಾಸ್ ಇನ್ನಿಂಗ್ಸ್ ಪ್ರದರ್ಶನ ತೋರಿದ್ದಾರೆ. ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೇ 69 ರನ್ ಹಾಕಿದ ಆರಂಭಿಕ ಜೋಡಿ ಮಾರ್ಕ್ರಮ್ ಹಾಗೂ ಡಿ ಕಾಕ್ 95 ರನ್‌ಗಳ ಜತೆಯಾಟವನ್ನಾಡಿತು. ಡಿ ಕಾಕ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಗಳಿಸಿದರೆ, ಮಾರ್ಕ್ರಮ್ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಚಚ್ಚಿದರು. ಇನ್ನುಳಿದಂತೆ ರಯಾನ್ ರಿಕಲ್ಟನ್ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 45 ರನ್ ಬಾರಿಸಿದರು.

ವೆಸ್ಟ್ ಇಂಡೀಸ್ ಪರ ರಾಸ್ಟನ್ ಚೇಸ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular