ನಿನ್ನೆ ( ಫೆಬ್ರವರಿ 27 ) ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳ ರೋಚಕ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 58 ರನ್‌ಗೆ ತನ್ನ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಟ್ಯಾಮ್ ಬ್ಯಾಂಟನ್ ಹಾಗೂ ಸ್ಯಾಮ್ ಕರನ್ ಜತೆಯಾಟ ಮತ್ತು ಅಂತಿಮ ಹಂತದಲ್ಲಿ ವಿಲ್ ಜ್ಯಾಕ್ಸ್ ಹಾಗೂ ರೆಹಾನ್ ಅಹ್ಮದ್ ಅಬ್ಬರದ ಆಟದ ನೆರವಿನಿಂದ 19.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿ ಸೋಲುವ ಪಂದ್ಯವನ್ನು ಗೆದ್ದುಬೀಗಿತು.
ಈ ಮೂಲಕ ಗ್ರೂಪ್ 2ರಿಂದ ಇಂಗ್ಲೆಂಡ್ ಬಳಿಕ ಯಾರು ಸೆಮಿಫೈನಲ್ ತಲುಪಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಇಂದು ( ಫೆಬ್ರವರಿ 28 ) ನಡೆಯಲಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ನ್ಯೂಜಿಲೆಂಡ್ 3 ಅಂಕಗಳನ್ನು ಹೊಂದಿದ್ದು ಇಂದಿನ ಪಂದ್ಯದಲ್ಲಿ ಪಾಕ್ ಗೆದ್ದರೆ ಅವರೂ ಸಹ 3 ಅಂಕಗಳನ್ನು ಹೊಂದಲಿದ್ದಾರೆ. ಒಂದುವೇಳೆ ಲಂಕಾ ಗೆದ್ದರೆ ಪಾಕ್ ಟೂರ್ನಿಯಿಂದ ಹೊರಬೀಳಲಿದ್ದು, ನ್ಯೂಜಿಲೆಂಡ್ ಸೆಮಿಫೈನಲ್ ತಲುಪಲಿದೆ.
ಪಾಕಿಸ್ತಾನ ಶ್ರೀಲಂಕಾ ಮಣಿಸಿದ ಮಾತ್ರಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಿಲ್ಲ. ಏಕೆಂದರೆ ನ್ಯೂಜಿಲೆಂಡ್ ನೆಟ್ ರನ್‌ರೇಟ್ +1.390 ಇದ್ದು, ಪಾಕಿಸ್ತಾನದ ನೆಟ್ ರನ್‌ರೇಟ್ -0.461 ಇದೆ. ಈ ನೆಟ್ ರನ್‌ರೇಟ್‌ನಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವ ಮಟ್ಟಕ್ಕೆ ಗೆದ್ದರೆ ಮಾತ್ರ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ ಸೆಮಿಫೈನಲ್ ತಲುಪಲಿದೆ. ಪಾಕಿಸ್ತಾನ ಈ ರೀತಿ ಮಾಡಲು ಶ್ರೀಲಂಕಾ ವಿರುದ್ಧ ದೊಡ್ಡ ಗೆಲುವನ್ನೇ ದಾಖಲಿಸಬೇಕಿದೆ. ಅದರ ಕುರಿತ ಮಾಹಿತಿ ಮುಂದಿದೆ.
ಪಾಕಿಸ್ತಾನ ನ್ಯೂಜಿಲೆಂಡ್‌ಗಿಂತ ಹೆಚ್ಚಿನ ನೆಟ್ ರನ್‌ರೇಟ್ ಹೊಂದಲು ಮೊದಲು ಬ್ಯಾಟಿಂಗ್ ಮಾಡಿದರೆ ಶ್ರೀಲಂಕಾ ವಿರುದ್ಧ 65 ರನ್‌ಗಳಿಂದ ಗೆಲ್ಲಬೇಕು. ಇದಕ್ಕಿಂತ ಒಂದು ರನ್ ಕಡಿಮೆಯಾದರೂ ಪಾಕಿಸ್ತಾನ ಎಲಿಮಿನೇಟ್ ಆಗಲಿದೆ.
ಇನ್ನು ಪಾಕಿಸ್ತಾನ ಚೇಸಿಂಗ್ ಮಾಡಿದರೆ ಶ್ರೀಲಂಕಾ ಎಷ್ಟೇ ಟಾರ್ಗೆಟ್ ನೀಡಿದರೂ ಅದನ್ನು 13 ಓವರ್‌ಗಳಲ್ಲಿ ಚೇಸ್ ಮಾಡಲೇಬೇಕು. ಒಂದುವೇಳೆ 14ನೇ ಓವರ್‌ಗೆ ಪಾಕ್ ಪ್ರವೇಶಿಸಿದ್ದೇ ಆದಲ್ಲಿ ಟೂರ್ನಿಯಿಂದ ಹೊರಬೀಳಲಿದೆ.

