HomeLatest News17 ಎಸೆತಕ್ಕೆ 42 ರನ್ ಬೇಕಿದ್ದಾಗ ಕೇವಲ 14 ಎಸೆತಗಳಲ್ಲೇ ಚಚ್ಚಿ ಕಿವೀಸ್ ಸೆಮೀಸ್ ಆಸೆಗೆ...

17 ಎಸೆತಕ್ಕೆ 42 ರನ್ ಬೇಕಿದ್ದಾಗ ಕೇವಲ 14 ಎಸೆತಗಳಲ್ಲೇ ಚಚ್ಚಿ ಕಿವೀಸ್ ಸೆಮೀಸ್ ಆಸೆಗೆ ಬ್ರೇಕ್ ಹಾಕಿ ಪಾಕ್‌ಗೆ ನೆರವಾದ ಇಂಗ್ಲೆಂಡ್‌ನ ಇಬ್ಬರು!

ನಿನ್ನೆ ( ಫೆಬ್ರವರಿ 27 ) ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಸೂಪರ್ 8 ಹಂತದ ಪಂದ್ಯ ರೋಚಕ ಅಂತ್ಯ ಕಂಡಿತು. ಇನ್ನೇನೂ ಇಂಗ್ಲೆಂಡ್ ಸೋತೇ ಬಿಡುತ್ತಾರೆ ಎನ್ನುತ್ತಿದ್ದಾಗ ಏಳನೇ ವಿಕೆಟ್‌ಗೆ ಜತೆಯಾದ ಜೋಡಿ ಕಿವೀಸ್ ಕೈನಲ್ಲಿದ್ದ ಪಂದ್ಯವನ್ನು ಕಿತ್ತುಕೊಂಡುಬಿಟ್ಟರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 58 ರನ್‌ಗೆ ತನ್ನ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಟ್ಯಾಮ್ ಬ್ಯಾಂಟನ್ ಹಾಗೂ ಸ್ಯಾಮ್ ಕರನ್ ಜತೆಯಾಟ ಮತ್ತು ಅಂತಿಮ ಹಂತದಲ್ಲಿ ವಿಲ್ ಜ್ಯಾಕ್ಸ್ ಹಾಗೂ ರೆಹಾನ್ ಅಹ್ಮದ್ ಅಬ್ಬರದ ಆಟದ ನೆರವಿನಿಂದ 19.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿ ಸೋಲುವ ಪಂದ್ಯವನ್ನು ಗೆದ್ದುಬೀಗಿತು.

ಈ ಸೋಲಿನ ಮೂಲಕ ನ್ಯೂಜಿಲೆಂಡ್ ತಂಡ ನೇರವಾಗಿ ಸೆಮಿಫೈನಲ್ ತಲುಪುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದು, ಇದೀಗ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯುವ ಪರಿಸ್ಥಿತಿ ಬಂದಿದೆ. ಇನ್ನು ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಗೆಲುವಿನಿಂದ ಸಂತಸವಾಗಿದ್ದು, ಸೆಮಿಫೈನಲ್ ತಲುಪಲು ನ್ಯೂಜಿಲೆಂಡ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್‌ರೇಟ್ ಬರುವ ಹಾಗೆ ಲಂಕಾ ತಂಡವನ್ನು ಸೋಲಿಸಿದರೆ ಮಾತ್ರ ಸೆಮಿಫೈನಲ್ ಟಿಕೆಟ್ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಿವೀಸ್ ನೀಡಿದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 2 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಫಿಲ್ ಸಾಲ್ಟ್ 2 ರನ್ ಗಳಿಸಿದರೆ, ಜೋಸ್ ಬಟ್ಲರ್ ಡಕ್‌ಔಟ್ ಆದರು. ಬಳಿಕ ಕಣಕ್ಕಿಳಿದ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆಥೆಲ್ ಮೂರನೇ ವಿಕೆಟ್‌ಗೆ 48 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಸುಧಾರಣೆ ತಂದರಾದರೂ ಒಬ್ಬರಾದ ಮೇಲೆ ಒಬ್ಬರು ವಿಕೆಟ್ ಒಪ್ಪಿಸಿದ ಕಾರಣ ಮತ್ತೆ ತಂಡ ಹಿನ್ನಡೆ ಅನುಭವಿಸಿತು. ಹ್ಯಾರಿ ಬ್ರೂಕ್ 26 ರನ್ ಕಲೆಹಾಕಿದರೆ ಬೆಥೆಲ್ 21 ರನ್ ಗಳಿಸಿದರು. ಅಲ್ಲಿಗೆ ಇಂಗ್ಲೆಂಡ್ ಕೇವಲ 58 ರನ್‌ಗೆ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಬಳಿಕ ಒಂದಾದ ಟಾಮ್ ಬ್ಯಾಂಟನ್ ಮತ್ತು ಸಾಮ್ ಕರನ್ ಜೋಡಿ 42 ರನ್‌ಗಳ ಜತೆಯಾಟವಾಡಿತಾದರೂ 35 ಎಸೆತಗಳನ್ನು ಆಡಿದ್ದರಿಂದ ಅಗತ್ಯ ರನ್‌ರೇಟ್ ಪ್ರಮಾಣ ಹೆಚ್ಚಾಗಿತ್ತು. ನಿಧಾನವಾಗಿ ಆಡುವುದನ್ನು ಬಿಟ್ಟು ದೊಡ್ಡ ಹೊಡೆತಗಳನ್ನು ಬಾರಿಸಬೇಕಾದ ಅಗತ್ಯವಿದ್ದಾಗಲೇ ಟಾಮ್ ಬ್ಯಾಂಟನ್ 33 ಹಾಗೂ ಸ್ಯಾಮ್ ಕರನ್ 24 ರನ್‌ಗೆ ಔಟ್ ಆದರು. ಈ ಸಂದರ್ಭದಲ್ಲಿ ಒಂದಾದ ವಿಲ್ ಜ್ಯಾಕ್ಸ್ ಹಾಗೂ ರೆಹಾನ್ ಅಹ್ಮದ್ ಜೋಡಿ ಕೇವಲ 16 ಎಸೆತಗಳಲ್ಲಿ ಬರೋಬ್ಬರಿ 44 ರನ್‌ಗಳನ್ನು ಅದೂ ಸಹ ಡೆತ್ ಓವರ್‌ನಲ್ಲಿ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನೇನು ಕಿವೀಸ್ ಗೆಲುವು ಪಕ್ಕಾ ಎನ್ನುವ ಸಂದರ್ಭದಲ್ಲಿ ಈ ಇಬ್ಬರು ಅಬ್ಬರಿಸಿ ಪಂದ್ಯವನ್ನು ಇಂಗ್ಲೆಂಡ್ ಕೈನಿಂದ ಕಿತ್ತುಕೊಂಡರು. ವಿಲ್ ಜ್ಯಾಕ್ಸ್ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 32 ರನ್ ಬಾರಿಸಿದರೆ, ರೆಹಾನ್ ಅಹ್ಮದ್ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸ್ಪೋಟಕ ಸಿಕ್ಸರ್ ಚಚ್ಚಿ ಅಜೇಯ 19 ರನ್ ಬಾರಿಸಿದರು.

ಇಂಗ್ಲೆಂಡ್ ಪರ ಸಮಾಧಾನಕರ ಬ್ಯಾಟಿಂಗ್ ಮಾಡಿ ಇನ್ನೇನು ಅಂತಿಮ ಹಂತದಲ್ಲಿ ಅಬ್ಬರಿಸುವ ನಿರೀಕ್ಷೆ ಹುಟ್ಟಿಸಿದ್ದ ಟಾಮ್ ಬ್ಯಾಂಟನ್ 17ನೇ ಓವರ್‌ನ ಐದನೇ ಎಸೆತದಲ್ಲಿ ರಚಿನ್ ರವೀಂದ್ರ ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆ ಸಮಯಕ್ಕೆ ಇಂಗ್ಲೆಂಡ್‌ಗೆ ಗೆಲ್ಲಲು 19 ಎಸೆತಗಳಲ್ಲಿ 43 ರನ್‌ಗಳ ಅಗತ್ಯವಿತ್ತು. ಒಂದೆಡೆ ವಿಲ್ ಜ್ಯಾಕ್ಸ್ ಕಣದಲ್ಲಿದ್ದರು. ಆಗ ಕಣಕ್ಕಿಳಿದದ್ದು ರೆಹಾನ್ ಅಹ್ಮದ್. 17ನೇ ಓವರ್‌ನ ಕೊನೆಯ ಎಸೆತಕ್ಕೆ ಯಾವುದೇ ರನ್ ಬಾರಿಸದ ರೆಹಾನ್ ವಿಲ್ ಜ್ಯಾಕ್ಸ್‌ಗೆ ಸ್ಟ್ರೈಕ್ ಬಿಟ್ಟುಕೊಟ್ಟರು.

18ನೇ ಓವರ್‌ ಮಾಡಲು ಬಂದ ಗ್ಲೆನ್ ಫಿಲಿಪ್ಸ್ ಮೊದಲ ಎಸೆತದಲ್ಲಿ ಜಾಕ್ಸ್ ಸಿಂಗಲ್ ಗಳಿಸಿದರು. ಅಲ್ಲಿಗೆ 17 ಎಸೆತಗಳಲ್ಲಿ 42 ರನ್ ಬೇಕಿತ್ತು. ಓವರ್‌ನ ಎರಡನೇ ಎಸೆತಕ್ಕೆ ರೆಹಾನ್ ಅಹ್ಮದ್ ಸಿಕ್ಸರ್ ಚಚ್ಚಿ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಬಳಿಕ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ವಿಲ್ ಜಾಕ್ಸ್ ಕ್ರಮವಾಗಿ ಸಿಕ್ಸ್, ಫೋರ್ ಹಾಗೂ ಫೋರ್ ಚಚ್ಚಿ ಅಬ್ಬರಿಸಿದರು. ಅಲ್ಲಿಗೆ ಗ್ಲೆನ್ ಫಿಲಿಪ್ಸ್ ಎಸೆದ ಈ ಓವರ್‌ನಲ್ಲೇ 22 ರನ್‌ಗಳು ಹರಿದುಬಂತು. ಕಿವೀಸ್ ಕೈನಲ್ಲಿದ್ದ ಪಂದ್ಯ ಇಂಗ್ಲೆಂಡ್‌ನತ್ತ ವಾಲಿತ್ತು.

ತಮ್ಮತ್ತ ಇದ್ದ ಪಂದ್ಯ ಕೈತಪ್ಪಿದ ಕೂಡಲೇ 19ನೇ ಓವರ್ ಬೌಲಿಂಗ್ ಮಾಡಲು ಸ್ವತಃ ನಾಯಕ ಮಿಚೆಲ್ ಸ್ಯಾಂಟ್ನರ್ ಮುಂದಾದರು. ಮೊದಲ ಎಸೆತಕ್ಕೆ ಫೋರ್ ಬಾರಿಸಿದ ರೆಹಾನ್ ಅಹ್ಮದ್ ಎರಡನೇ ಎಸೆತಕ್ಕೆ ಸಿಂಗಲ್ ತೆಗೆದುಕೊಂಡರು. ಮೂರನೇ ಮತ್ತು ನಾಲ್ಕನೇ ಎಸೆತದಲ್ಲಿ ತಲಾ ಎರಡು ರನ್ ಬಾರಿಸಿದ ಜಾಕ್ಸ್ ಐದನೇ ಎಸೆತದಲ್ಲಿ ಸಿಂಗಲ್ ಗಳಿಸಿದರು. ಅಲ್ಲಿಗೆ 7 ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿತ್ತು. ಇದೊಂದು ಡಾಟ್ ಬಾಲ್ ಆದರೆ ಕೊನೆಯ ಓವರ್‌ನಲ್ಲಿ ಒತ್ತಡ ಸೃಷ್ಟಿಸುವ ಯೋಜನೆಯಲ್ಲಿದ್ದ ಕಿವೀಸ್‌ಗೆ ರೆಹಾನ್ ಶಾಕ್ ಕೊಟ್ಟರು. ಸ್ಯಾಂಟ್ನರ್ ಎಸೆದ ಕೊನೆಯ ಎಸೆತಕ್ಕೆ ಸಿಕ್ಸರ್ ಬಾರಿಸಿ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ ಕೇವಲ 5 ರನ್ ಬೇಕಾಗುವಂತೆ ಮಾಡಿದರು.

ಮ್ಯಾಟ್ ಹೆನ್ರಿ ಎಸೆದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ವಿಲ್ ಜಾಕ್ಸ್ ಸಿಂಗಲ್ ಹಾಗೂ ಎರಡನೇ ಎಸೆತದಲ್ಲಿ ರೆಹಾನ್ ಸಿಂಗಲ್ ತೆಗೆದುಕೊಂಡರು. ಮೂರನೇ ಎಸೆತದಲ್ಲಿ ಜಾಕ್ಸ್ ಚೆಂಡನ್ನು ಬೌಂಡರಿಗಟ್ಟಿದರು. ಅಲ್ಲಿಗೆ ಇನ್ನೂ 3 ಎಸೆತ ಬಾಕಿ ಇರುವಾಗಲೇ ಇಂಗ್ಲೆಂಡ್ ಗೆದ್ದುಬೀಗಿತು. ಹೀಗೆ 17 ಎಸೆತಕ್ಕೆ ಬೇಕಿದ್ದ 42 ರನ್‌ಗಳನ್ನು ಈ ಜೋಡಿ ಕೇವಲ 14 ಎಸೆತದಲ್ಲೇ ಚಚ್ಚಿ ಅಬ್ಬರಿಸಿತು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular