ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 8 ಸುತ್ತಿನ ತಮ್ಮ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
ಇನ್ನು ಪಾಕಿಸ್ತಾನದ ಸೆಮಿಫೈನಲ್ ಪ್ರವೇಶದ ಭವಿಷ್ಯ ಈ ಪಂದ್ಯದ ಫಲಿತಾಂಶದ ಮೇಲೆ ಆಧಾರವಾಗಿದ್ದು, ಇದು ಪಾಕ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆದರೆ ಕೇವಲ ಶ್ರೀಲಂಕಾ ವಿರುದ್ಧ ಗೆದ್ದರೆ ಮಾತ್ರ ಪಾಕಿಸ್ತಾನ ಸೆಮಿ ಫೈನಲ್ ಅರ್ಹತೆ ಪಡೆದುಕೊಳ್ಳುವುದಿಲ್ಲ. ಬದಲಾಗಿ ನ್ಯೂಜಿಲೆಂಡ್ ತಂಡವನ್ನು ಮೀರಿಸುವಂತಹ ನೆಟ್ ರನ್ ರೇಟ್ ಸಂಪಾದಿಸಬೇಕಿದೆ.
ಇದೇ ಕಾರಣಕ್ಕೆ ಇದೀಗ ಟಾಸ್ ಆದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಬೇಸರಕೊಳಗಾಗಿದ್ದಾರೆ. ಕಾರಣ ಟಾಸ್ ಗೆದ್ದ ಶ್ರೀಲಂಕಾ ಇದೀಗ ಫೀಲ್ಡಿಂಗ್ ಆರಿಸಿಕೊಂಡಿದ್ದು, ಪಾಕಿಸ್ತಾನಕ್ಕೆ ದೊಡ್ಡ ಮೊತ್ತದ ಅಂತರದಲ್ಲಿ ಗೆಲ್ಲಬೇಕಾದ ಸವಾಲು ಎದುರಾಗಿದೆ.
ಹೌದು, ಪಾಕಿಸ್ತಾನ 65 ರನ್ ಗಳ ಅಂತರದಲ್ಲಿ ಗೆಲ್ಲಲೇಬೇಕಾಗಿದ್ದು, ಇದಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದರೂ ಉಪಯೋಗವಿಲ್ಲ. ನ್ಯೂಜಿಲೆಂಡ್ ಸೆಮಿ ಫೈನಲ್ ಪ್ರವೇಶ ಪಡೆದುಕೊಳ್ಳಲಿದ್ದು ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.
ಒಂದು ವೇಳೆ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿದ್ದರೆ ಅವರು ನೀಡುವ ಗುರಿಯನ್ನು ಪಾಕಿಸ್ತಾನ 14 ಓವರ್ ಒಳಗೆ ಬೆನ್ನತ್ತಬೇಕಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತದಿಂದ ಗೆಲ್ಲುವುದು ಕಷ್ಟ, ಅದರ ಬದಲು ಚೇಸ್ ಮಾಡುವುದು ಉತ್ತಮ ಆಯ್ಕೆಯಾಗಿತ್ತು ಎಂದು ಪಾಕಿಸ್ತಾನದ ಅಭಿಮಾನಿಗಳು ತಲೆ ಮೇಲೆ ಕೈ ಹೊತ್ತಿದ್ದಾರೆ.

