HomeKarnatakaಇತಿಹಾಸ ಸೃಷ್ಟಿಸುವಂತೆ ಶಾಲಾ ಮಕ್ಕಳನ್ನು ತಯಾರು ಮಾಡಿ: ಶಿಕ್ಷಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು

ಇತಿಹಾಸ ಸೃಷ್ಟಿಸುವಂತೆ ಶಾಲಾ ಮಕ್ಕಳನ್ನು ತಯಾರು ಮಾಡಿ: ಶಿಕ್ಷಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು

ಬೆಂಗಳೂರು: ಇತಿಹಾಸದ ಪಾಠ ಕಲಿಸುವ ಕೆಲಸವಷ್ಟೇ ಆಗಬಾರದು, ಇತಿಹಾಸ ಸೃಷ್ಟಿಸುವಂತೆ ಮಕ್ಕಳನ್ನು ತಯಾರು ಮಾಡಿ. ನೀವು ಶಾಲೆಗೆ ಬರುವ ಮಕ್ಕಳನ್ನು ಮಾತ್ರ ಬೆಳೆಸುತ್ತಿಲ್ಲ. ಸಮಾಜವನ್ನೇ ಬೆಳೆಸುತ್ತಿದ್ದೀರಿ. ನೀವು ಪಾಠ ಹೇಳಿಕೊಟ್ಟ ಮಕ್ಕಳು ಎತ್ತರಕ್ಕೆ ಬೆಳೆದಾಗ ನಿಮಗೆ ಆಗುವ ಸಂತೋಷ ಬೇರೆ ಯಾವ ಸಮಯದಲ್ಲೂ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಈ ನಾಡಿದ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಅವರನ್ನು ಓಡುವ ಕುದುರೆಗಳಂತೆ ತಯಾರು ಮಾಡಬೇಕು. ಬೆಂಗಳೂರಿನಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಪ್ರತಿಯೊಂದು ಶಾಲೆಯಲ್ಲೂ ದೊರೆಯುವಂತೆ ಶಿಕ್ಷಕರು ಶ್ರಮಿಸಬೇಕು ಎಂದರು.

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸುವುದಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ನಾನು ಶಾಲಾ ಕಾರ್ಯಕ್ರಮಕ್ಕೆ ಹೋದರೆ ಮಕ್ಕಳಿಗೆ ಒಂದು ಮಾತು ಹೇಳುತ್ತೇನೆ. ನೀವು ಕನಸು ಕಾಣಬೇಕು. ಅದನ್ನು ನನಸಾಗಿಸಲು ಶ್ರಮ, ಬದ್ಧತೆ, ಶಿಸ್ತು ಇರಬೇಕು. ಮಕ್ಕಳು ದೊಡ್ಡ ಕನಸು ಕಾಣುವಂತೆ ಮಾಡಬೇಕು. ನೀವು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಹಾಕುವ ಅಡಿಪಾಯ ಕೊನೆವರೆಗೂ ಇರುತ್ತದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ಸಿಗಬೇಕು ಎಂದು ಸಿಎಸ್ಆರ್ ಶಾಲೆ ಆರಂಭಿಸಲು ನೀತಿ ರೂಪಿಸಿದ್ದೇವೆ. 8-10 ಸಾವಿರ ಕೋಟಿ ಸಿಎಸ್ಆರ್ ಹಣ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆಗೆ ತೀರ್ಮಾನಿಸಿದ್ದೇವೆ. ಮಕ್ಕಳು ಶಿಕ್ಷಣಕ್ಕೆ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುವುದು ತಪ್ಪಬೇಕು. ಉತ್ತಮವಾಗಿರುವ ಖಾಸಗಿ ಶಾಲೆಗಳು ಈ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಶಿಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದ್ದೇವೆ. ಈ ಮೂಲಕ 90 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಮುಂದಿನ ದಿನಗಳಲ್ಲಿ ಇದನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.

ನಾವು ನಿಮ್ಮ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡು, ಅನೇಕ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ತೀರ್ಮಾನ ಮಾಡುತ್ತಿದ್ದೇವೆ. 1 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಮೊನ್ನೆಯಷ್ಟೇ ಯುವಕರ ಬದುಕಿನ ವಿಚಾರದಲ್ಲಿ ದೊಡ್ಡ ತೀರ್ಮಾನ ಮಾಡಿದ್ದು, 2.50 ಲಕ್ಷ ಹುದ್ದೆಗಳ ಪೈಕಿ, 56 ಸಾವಿರ ನೇಮಕಾತಿ ಮಾಡಲು ಅನುಮೋದನೆ ನೀಡಿದ್ದೇವೆ. ಸುಮಾರು 5 ಗಂಟೆಗಳ ಕಾಲ ಇವುಗಳ ಸಾಧಕ ಬಾಧಕಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.

ಸಂಘದ ಅಧ್ಯಕ್ಷರು ಅನೇಕ ಬೇಡಿಕೆಗಳನ್ನು ನೀಡಿದ್ದಾರೆ. ನನ್ನ ಪರಿಮಿತಿಯಲ್ಲಿ ಸಾಧ್ಯವಾಗುವ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ. ಸಂಘದ ಕಟ್ಟಡಕ್ಕೆ ಬಿಡಿಎ ಅಥವಾ ಜಿಬಿಎ ಅಡಿ ಎಲ್ಲಿ ನಿವೇಶನ ಲಭ್ಯವಿದೆ ಎಂದು ನೋಡಿಕೊಂಡು ನಿಮಗೆ ನೀಡಲಾಗುವುದು ಎಂದರು.

ಶಿಕ್ಷಣ ವೃತ್ತಿ ಮೂಲಕ ನೀವು ದೊಡ್ಡ ತ್ಯಾಗ ಮಾಡುತ್ತಿದ್ದೀರಿ. ನೀವು ನಿಮ್ಮ ವಿಚಾರಗಳಿಗೆ ಹೋರಾಟ ಮಾಡುತ್ತಿದ್ದೀರಿ. ನೀವು ನಮ್ಮನ್ನು ಇರಿಸಿಕೊಳ್ಳಬಹುದು, ಮೇಲಕ್ಕೆ ಏರಿಸಬಹುದು. ಉಪಕಾರ ಸ್ಮರಣೆಯೂ ಇರಬೇಕು. ಕೆಲವರು ಭಾವನೆ ಮೇಲೆ ಎಲ್ಲವನ್ನು ತೆಗೆದುಕೊಂಡು ಹೋಗುತ್ತಾರೆ. ನಾವು ಬದುಕಿನ ಮೇಲೆ ತೀರ್ಮಾನ ಮಾಡುತ್ತೇವೆ. ನಾನು ಸಿದ್ದರಾಮಯ್ಯ ಅವರು ಏನೇ ಮಾಡಿದರೂ ಬದುಕಿನ ಮೇಲೆ ತೀರ್ಮಾನ ಮಾಡುತ್ತಿದ್ದೇವೆ ಎಂದರು.

ಬಂಗಾರಪ್ಪ ಅವರ ಕಾಲದಲ್ಲಿ ಗ್ರಾಮೀಣ ಕೃಪಾಂಕ ಯೋಜನೆಯಿಂದ ಅನೇಕರು ಶಿಕ್ಷಣ ವೃತ್ತಿಗೆ ಸೇರುವಂತಾಯಿತು. ರಾಜೀವ್ ಗಾಂಧಿ ಅವರು ಆಪರೇಷನ್ ಬ್ಲಾಕ್ ಬೋರ್ಡ್ ಯೋಜನೆ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.

ಮೂರು ಶಾಲೆ ನಡೆಸುತ್ತಿರುವ ನನ್ನ ಮಗಳಿಗೂ ಸರ್ಕಾರಿ ಶಾಲೆ ದತ್ತು ಪಡೆಯುವಂತೆ ಸೂಚಿಸಿದ್ದೇನೆ. ನಮ್ಮ ಕ್ಷೇತ್ರದ ಶಾಲೆಗಳನ್ನು ದತ್ತು ಪಡೆಯಲಾಗುತ್ತಿದೆ. ನಾನು ಶಿಕ್ಷಣ ಪ್ರೇಮಿ. ಶಿಕ್ಷಣದ ಮೇಲಿನ ಪ್ರೀತಿಯಿಂದ 2007ರಲ್ಲಿ ಪದವಿ ಪಡೆದೆ. ಇದು ನನಗೆ ಬಹಳ ಸಂತೋಷ ನೀಡಿದ ಸಮಯ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular