ಶ್ರೀಲಂಕಾದ ಕೊಲಂಬೊ ಸಿನ್ಹಳೀಸ್ ಕ್ರಿಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನ ನಮೀಬಿಯಾ ವಿರುದ್ಧ 102 ರನ್‌ಗಳ ಗೆಲುವನ್ನು ದಾಖಲಿಸಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ ನಮೀಬಿಯಾ ತಂಡಕ್ಕೆ 200 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನಮೀಬಿಯಾ 17.3 ಓವರ್‌ಗಳಲ್ಲಿ 97 ರನ್‌ಗೆ ಆಲ್‌ಔಟ್ ಆಯಿತು.
ಪಾಕಿಸ್ತಾನದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಸಹಿಬ್ಜಾದಾ ಫರ್ಹಾನ್ ಹಾಗೂ ಸೈಮ್ ಆಯೂಬ್ ಕಣಕ್ಕಿಳಿದರು. ಆಯೂಬ್ 14 ರನ್‌ಗೆ ವಿಕೆಟ್ ಒಪ್ಪಿಸಿದರೆ, ಫರ್ಹಾನ್ ಕೊನೆಯವರೆಗೂ ಕಣದಲ್ಲಿದ್ದು, 58 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿ ಅಬ್ಬರಿಸಿದರು. ಇದು ಈ ಬಾರಿಯ ಟೂರ್ನಿಯಲ್ಲಿ ದಾಖಲಾದ ಮೂರನೇ ಶತಕ ಹಾಗೂ ಫರ್ಹಾನ್ ಪಾಲಿಗೆ ಚೊಚ್ಚಲ ಟಿ ಟ್ವೆಂಟಿ ಶತಕವಾಗಿದೆ. ಇನ್ನುಳಿದಂತೆ ನಾಯಕ ಸಲ್ಮಾನ್ ಅಲಿ ಆಘಾ 38, ಖಾವಾಜಾ ನಫೆ 5 ಹಾಗೂ ಅಂತಿಮ ಹಂತದಲ್ಲಿ ಫರ್ಹಾನ್‌ಗೆ ಸರಿಯಾದ ಜತೆಯಾಟ ನೀಡಿದ ಶದಾಬ್ ಖಾನ್ 22 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 36 ರನ್ ಬಾರಿಸಿದರು.
ನಮೀಬಿಯಾ ಪರ ಜಾಕ್ ಬ್ರಾಸೆಲ್ ಎರಡು ವಿಕೆಟ್ ಹಾಗೂ ನಾಯಕ ಜೆರಾರ್ಡ್ ಎರಾಸ್ಮಸ್ ಒಂದು ವಿಕೆಟ್ ಪಡೆದರು.
ನಮೀಬಿಯಾ ಇನ್ನಿಂಗ್ಸ್: ತಂಡದ ಪರ ಲಾರೆನ್ ಸ್ಟೀನ್‌ಕಾಂಪ್ 23, ಜಾನ್ ಫ್ರೈಲಿಂಕ್ 9, ಜಾನ್ ಲಿಕೊನ್ ಲಾಫ್ಟಿ-ಈಟನ್ 5, ನಾಯಕ ಜೆರಾರ್ಡ್ ಎರಾಸ್ಮಸ್ 7, ಅಲೆಕ್ಸಾಂಡರ್ ವಾಲ್ಶೆಂಕ್ 20, ಜೆಜೆ ಸ್ಮಿಟ್ 9, ಜೇನ್ ಗ್ರೀನ್ 7, ರುಬೆನ್ ಟ್ರಂಪೆಲ್‌ಮನ್ ಡಕ್ಔಟ್, ವಿಲ್ಲೆಮ್ ಮೈಬರ್ಗ್ 8, ಬೆರ್ನಾರ್ಡ್ ಸ್ಕಾಲ್ಟ್ಜ್ 1 ಹಾಗೂ ಜಾಕ್ ಬ್ರಾಸೆಲ್ ಅಜೇಯ 1 ರನ್ ಗಳಿಸಿದರು.
ಪಾಕಿಸ್ತಾನದ ಪರ ಉಸ್ಮಾನ್ ತಾರಿಕ್ ನಾಲ್ಕು ವಿಕೆಟ್, ಶದಾಬ್ ಖಾನ್ ಮೂರು ವಿಕೆಟ್, ಮೊಹಮ್ಮದ್ ನವಾಜ್ ಹಾಗೂ ಸಲ್ಮಾನ್ ಮಿರ್ಜಾ ತಲಾ ಒಂದೊಂದು ವಿಕೆಟ್ ಪಡೆದರು.

