ಬೆಂಗಳೂರು: ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಸಫಾರಿ ನಾಳೆಯಿಂದ ಪುನರಾರಂಭಗೊಳ್ಳಲಿದೆ. ಅರಣ್ಯ ಇಲಾಖೆಯಿಂದ ನಾಳೆಯಿಂದಲೇ ಸಫಾರಿ ಪುನಾರಂಭಕ್ಕೆ ನಿರ್ಧರಿಸಲಾಗಿದೆ.
ಈ ಬಗ್ಗೆ ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದ್ದು, ಜನವರಿ 2ರಂದು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ಮಾಡಿದ್ದೆವು. ಹಿರಿಯ ಅಧಿಕಾರಿಗಳ ನೇತೃತ್ವದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಸಫಾರಿ ಪುನರಾರಭಿಸಲು ಬೇಡಿಕೆ ಇದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ ಎಂದರು.
ಇನ್ನು ಪೂರ್ತಿ ವರದಿ ಬಂದ ಬಳಿಕ ಶೇ.100ರಷ್ಟು ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡುತ್ತೇವೆ, ನಾಳೆಯಿಂದ ಶೇ.50ರಷ್ಟು ಸಫಾರಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ನಿರ್ಧರಿಸಲಾಗಿದ್ದು, ಸಫಾರಿ ಅವಧಿಯಲ್ಲಿಯೂ ಕೆಲ ಬದಲಾವಣೆ ಮಾಡಲಾಗಿದೆ. ಬಂಡೀಪುರದಲ್ಲಿ ಬೆಳಿಗ್ಗೆ 8 ಗಂಟೆಯಿಂದ 5ಗಂಟೆ ಅವಧಿ ಇಳಿಕೆ ಮಾಡಲಾಗಿದ್ದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ.
ಅಲ್ಲದೆ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಕ್ಯಾಂಪ್ ಫೈರ್ ಗೆ ನಿರ್ಬಂಧ ವಿಧಿಸಿ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರಿಂದಾಗಿ ಪ್ರವಾಸಿಗರು ಕೇರಳ ಹಾಗೂ ತಮಿಳುನಾಡಿನತ್ತ ಮುಖ ಮಾಡಿದ್ದರು. ಪರಿಣಾಮವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗಿದೆ. ರಣಥಂಬೋರ್ ಹಾಗೂ ಕಾರ್ಬೆಟ್ ಸೇರಿದಂತೆ ಇತರ ರಾಜ್ಯಗಳ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ (KETRA) ದೂರಿತ್ತು.
ಅಲ್ಲದೆ ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್ ಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿ ಸ್ಥಗಿತಗೊಂಡಿದ್ದರಿಂದ ಇವರ ಜೀವನ ನಿರ್ವಹಣೆ ಮೇಲೆ ಪರಿಣಾಮ ಬಿದ್ದಿದೆ ಎಂದು ವರದಿಯಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ನಾಗರಹೊಳೆ ಹಾಗೂ ಬಂಡಿಪುರದಲ್ಲಿ ಸಫಾರಿ ಪುನರಾಂಭವಾಗಲಿದೆ.

