HomeLatest NewsT20 World Cup 2026: ನಮೀಬಿಯ ವಿರುದ್ಧ ನೆದರ್ಲೆಂಡ್ಸ್‌ಗೆ ಗೆಲುವು; ನಷ್ಟವಾಗಿದ್ದು ಪಾಕಿಸ್ತಾನಕ್ಕೆ

T20 World Cup 2026: ನಮೀಬಿಯ ವಿರುದ್ಧ ನೆದರ್ಲೆಂಡ್ಸ್‌ಗೆ ಗೆಲುವು; ನಷ್ಟವಾಗಿದ್ದು ಪಾಕಿಸ್ತಾನಕ್ಕೆ

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 10 ) ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 10ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ನಮೀಬಿಯ ವಿರುದ್ಧ 7 ವಿಕೆಟ್‌ಗಳ ಗೆಲುವನ್ನು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ನೆದರ್ಲೆಂಡ್ಸ್ ನಮೀಬಿಯ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿ ನೆದರ್ಲೆಂಡ್ಸ್‌ಗೆ 157 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ನೆದರ್ಲೆಂಡ್ಸ್ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತು.

ನಮೀಬಿಯ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಲಾರೆನ್ ಸ್ಟೀನ್‌ಕಾಂಪ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿ ತಂಡ ಆರಂಭಿಕ ಆಘಾತ ಅನುಭವಿಸಿತು. ಎರಡನೇ ವಿಕೆಟ್‌ಗೆ ಜತೆಯಾದ ಮತ್ತೋರ್ವ ಆರಂಭಿಕ ಜಾನ್ ಫ್ರಿಲಿಂಕ್ ಹಾಗೂ ಜಾನ್ ನಿಕೋಲ್ ಲಾಫ್ಟಿ-ಈಟನ್ ಅರ್ಧಶತಕದ ಜತೆಯಾಟವನ್ನಾಡಿದರು. ಜಾನ್ ಫ್ರಿಲಿಂಕ್ 30 ರನ್ ಗಳಿಸಿದರೆ, ಜಾನ್ ನಿಕೋಲ್ ಲಾಫ್ಟಿ-ಈಟನ್ 42 ರನ್ ಬಾರಿಸಿದರು. ಇನ್ನುಳಿದಂತೆ ನಾಯಕ ಗೆರ್‌ಹಾರ್ಡ್ ಎರಾಸ್ಮಸ್ 18, ಜೆಜೆ ಸ್ಮಿತ್ 22, ಜೇನ್ ಗ್ರೀನ್ 9, ರೂಬೆನ್ ಟ್ರಂಪಲ್‌ಮನ್ 9, ವಿಲ್ಲೆಮ್ ಮೈಬರ್ಗ್ 4 ರನ್ ಹಾಗೂ ಡೈಲನ್ ಲೀಚರ್ ಅಜೇಯ 6 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆದರ್ಲೆಂಡ್ಸ್ ಪರ ಬಾಸ್ ಡೆ ಲೀಡ್ ಹಾಗೂ ಲಾಗನ್ ವಾನ್ ಬೀಕ್ ತಲಾ ಎರಡು ವಿಕೆಟ್ ಪಡೆದರೆ, ಆರ್ಯನ್ ದತ್ ಹಾಗೂ ಫ್ರೆಡ್ ಕ್ಲಾಸೀನ್ ತಲಾ ಒಂದೊಂದು ವಿಕೆಟ್ ಪಡೆದರು.

ನೆದರ್ಲೆಂಡ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕೆಲ್ ಲೆವಿಟ್ 28 ರನ್ ಗಳಿಸಿದರೆ, ಮ್ಯಾಕ್ಸ್ ಓಡೌಡ್ 7 ರನ್ ಗಳಿಸಿದರು. ಇನ್ನುಳಿದಂತೆ ಕಾಲಿನ್ ಆಕರ್‌ಮನ್ 32 ರನ್, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಸ್ ಡೆ ಲೀಡ್ 48 ಎಸೆತಗಳಲ್ಲಿ ಅಜೇಯ 72 ರನ್ ಹಾಗೂ ಸ್ಕಾಟ್ ಎಡ್ವರ್ಡ್ಸ್ ಅಜೇಯ 18 ರನ್ ಗಳಿಸಿದರು.

ನಮೀಬಿಯ ಪರ ಬರ್ನಾರ್ಡ್ ಶಾಲ್ಟ್ಜ್ , ರೂಬೆನ್ ಟ್ರಂಪಲ್‌ಮನ್ ಹಾಗೂ ಜಾನ್ ನಿಕೋಲ್ ಲಾಫ್ಟಿ-ಈಟನ್ ತಲಾ ಒಂದೊಂದು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದ ನೆದರ್ಲೆಂಡ್ಸ್ ಗ್ರೂಪ್ ಎನಲ್ಲಿ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, ಎರಡನೇ ಸ್ಥಾನದಲ್ಲಿದ್ದ ಪಾಕ್ ಮೂರನೇ ಸ್ಥಾನಕ್ಕೆ ಕುಸಿದಿದೆ ಹಾಗೂ ಟೀಮ್ ಇಂಡಿಯಾ ಮೊದಲ ಸ್ಥಾನದಲ್ಲಿದೆ. ಈ ಮೂರು ತಂಡಗಳು ಸಹ ಎರಡು ಅಂಕಗಳನ್ನು ಹೊಂದಿದ್ದು, ನೆಟ್ ರನ್‌ರೇಟ್ ಆಧಾರದ ಮೇಲೆ ಸ್ಥಾನ ನಿರ್ಧಾರವಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular