ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದ ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಭಾರತ ತಂಡ ಸೂಪರ್ 8 ಪ್ರವೇಶ ಪಡೆದುಕೊಳ್ಳುತ್ತಿದ್ದಂತೆ ಮಂಕಾಗಿದೆ.
ಅಹ್ಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಹೀನಾಯ ಸೋಲನ್ನು ಕಂಡ ಭಾರತ ಸೆಮಿ ಫೈನಲ್ ಪ್ರವೇಶದ ಕುರಿತಾಗಿ ಸದ್ಯ ಸಂಕಷ್ಟಕ್ಕೆ ಸಿಲುಕಿದೆ.
ಹೌದು, ನಿನ್ನೆ ( ಫೆಬ್ರವರಿ 23 ) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಂಬೆ ವಿರುದ್ಧ ವೆಸ್ಟ್ ಇಂಡೀಸ್ 107 ರನ್ ಗಳ ಭರ್ಜರಿ ಜಯ ಸಾಧಿಸಿರುವ ಕಾರಣ ಗ್ರೂಪ್ 1ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದು ಭಾರತದ ವಿರುದ್ಧ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. -3.800 ಹೀನಾಯ ನೆಟ್ ರನ್ ರೇಟ್ ಹೊಂದಿರುವ ಭಾರತ ಮೂರನೇ ಸ್ಥಾನದಲ್ಲಿದ್ದು, ಸದ್ಯ ಅಭಿಮಾನಿಗಳು ಭಾರತ ಸೆಮಿಫೈನಲ್ ಪ್ರವೇಶಿಸಲು ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಫಲಿತಾಂಶ ಬರಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಈ ಲೆಕ್ಕಾಚಾರದ ವಿಷಯಕ್ಕೆ ಬರುವುದಾದರೆ ಭಾರತ ಉಳಿದ ಪಂದ್ಯಗಳನ್ನು ಗೆದ್ದ ಮಾತ್ರಕ್ಕೆ ನೇರವಾಗಿ ಸೆಮಿ ಫೈನಲ್ ಪ್ರವೇಶಿಸುವುದು ಅಸಾಧ್ಯ. ಏಕೆಂದರೆ ಟೀಮ್ ಇಂಡಿಯಾ ನೆಟ್ ರನ್ ರೇಟ್ ಸಮಸ್ಯೆ ಎದುರಿಸುತ್ತಿದೆ. ಆದರೆ ನೆಟ್ ರನ್ ರೇಟ್ ಪರಿಗಣಿಸದೆ ಕೇವಲ ಅಂಕಗಳನ್ನು ಪರಿಗಣಿಸಿ ಭಾರತ ಸೆಮಿ ಫೈನಲ್ ಪ್ರವೇಶಿಸಲು 2 ಹಾದಿಗಳಿದ್ದು, ಅವುಗಳು ಯಾವುವು ಎಂಬ ಮಾಹಿತಿ ಮುಂದಿದೆ.
ಮೊದಲನೇ ಹಾದಿ: ಭಾರತ, ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ – ವೆಸ್ಟ್ ಇಂಡೀಸ್ ಗೆಲ್ಲಬೇಕು
ಭಾರತ vs ಜಿಂಬಾಬ್ವೆ – ಭಾರತ ಗೆಲ್ಲಬೇಕು
ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ – ಜಿಂಬಾಬ್ವೆ ಗೆಲ್ಲಬೇಕು
ಭಾರತ vs ವೆಸ್ಟ್ ಇಂಡೀಸ್ – ಭಾರತ ಗೆಲ್ಲಬೇಕು
ಈ ರೀತಿ ನಡೆದರೆ ವೆಸ್ಟ್ ಇಂಡೀಸ್ ಹಾಗೂ ಭಾರತ ಎರಡು ತಂಡಗಳು ತಲಾ ನಾಲ್ಕು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.
ಎರಡನೇ ಹಾದಿ: ಭಾರತ, ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ – ದಕ್ಷಿಣ ಆಫ್ರಿಕಾ ಗೆಲ್ಲಬೇಕು
ಭಾರತ vs ಜಿಂಬಾಬ್ವೆ – ಭಾರತ ಗೆಲ್ಲಬೇಕು
ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ – ಯಾರೇ ಗೆದ್ದರೂ ಸರಿ
ಭಾರತ vs ವೆಸ್ಟ್ ಇಂಡೀಸ್ – ಭಾರತ ಗೆಲ್ಲಬೇಕು
ಹೀಗೆ ನಡೆದರೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ ನಾಲ್ಕು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಸೆಮಿ ಫೈನಲ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿವೆ.

