ನಗರಸಭೆ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್‌ಗೆ ಮತ ಹಾಕಿದ್ದ 7 ಸದಸ್ಯರು ಅನರ್ಹಗೊಂಡಿದ್ದಾರೆ. ಕರ್ನಾಟಕ ಜೆಡಿಎಸ್ ಈ ಕುರಿತು ಮಾಹಿತಿ ನೀಡಿದೆ.
ನೆಲಮಂಗಲ ನಗರಸಭೆ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ವಿಪ್ ಉಲ್ಲಂಘನೆ ಮಾಡಿ ಜೆಡಿಎಸ್‌ನ 7 ಸದಸ್ಯರು ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿದ್ದರು. ಈ ಕುರಿತು ಜೆಡಿಎಸ್ ಪಕ್ಷ ದೂರು ಸಲ್ಲಿಕೆ ಮಾಡಿತ್ತು.
ಜೆಡಿಎಸ್ ದೂರನ್ನು ಪರಿಗಣಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರು ಕ್ರಮ ಕೈಗೊಂಡು 7 ಮಂದಿ ನಗರಸಭೆಯ ಸದಸ್ಯರನ್ನು ಅನರ್ಹರಗೊಳಿಸಿದ್ದಾರೆ ಎಂದು ಜೆಡಿಎಸ್ ಪಕ್ಷ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದೆ.
13/02/2025ರಂದು ನೆಲಮಂಗಲ ನಗರಸಭೆ ಅಧ್ಯಕ್ಷರ ಚುನಾವಣೆ ನಡೆದಿತ್ತು. ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷವು ಜಾರಿಗೊಳಿಸಿದ ವಿಪ್ ಅನ್ನು ಉಲ್ಲಂಘಿಸಿ, ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಸದಸ್ಯರು ಅನರ್ಹಗೊಂಡಿದ್ದಾರೆ.
ಚುನಾವಣೆಯಲ್ಲಿ ನೆಲಮಂಗಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎನ್.ಗಣೇಶ್ ಮತ್ತು ಉಪಾಧ್ಯಕ್ಷರಾಗಿ ಜಿ.ಆನಂದ್ ಆಯ್ಕೆಯಾಗಿದ್ದರು. ಜೆಡಿಎಸ್ ಮತ್ತು ಬಿಜೆಪಿಯ ಒಟ್ಟು 9 ಸದಸ್ಯರು ಅಡ್ಡ ಮತದಾನ ಮಾಡಿದ ಕಾರಣಕ್ಕೆ ನಗರಸಭೆ ಅಧ್ಯಕ್ಷ ಹುದ್ದೆ ಕಾಂಗ್ರೆಸ್ ಪಾಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎನ್.ಗಣೇಶ್ 18 ಮತ, ಎದುರಾಳಿ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಆಂಜನಮೂರ್ತಿ 10 ಮತಗಳನ್ನು ಪಡೆದರು. ಎನ್.ಗಣೇಶ್ ಗೆಲುವು ಸಾಧಿಸಿದರು.
ಉಪಾಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ. ಆನಂದ್ 18 ಮತ್ತು ಜೆಡಿಎಸ್-ಬಿಜೆಪಿ ಅಭ್ಯರ್ಥಿ ಆಂಜನಪ್ಪ 10 ಮತಗಳನ್ನು ಪಡೆದರು. ಶಾಸಕ ಎನ್.ಶ್ರೀನಿವಾಸ್ ಮತ್ತು ಮಾಜಿ ಎಂಎಲ್‌ಸಿ ಬಿ.ಎಂ.ಎಲ್.ಕಾಂತರಾಜು ತಂತ್ರಗಾರಿಕೆ ಕಾರಣಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸೋಲಾಗಿತ್ತು.
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದು ವಿಪ್ ಜಾರಿ ಮಾಡಲಾಗಿತ್ತು. ಆದರೆ ಜೆಡಿಎಸ್‌ನ 7, ಬಿಜೆಪಿಯ 2 ಸದಸ್ಯರು ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿದ್ದರು.

