ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 18ನೇ ಪಂದ್ಯದಲ್ಲಿ ಭಾರತ ನಮೀಬಿಯಾ ವಿರುದ್ಧ 93 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸುವ ಮೂಲಕ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೀಗಾಗಿ ಈ ಪಂದ್ಯಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ಪಾಕ್ ಎರಡನೇ ಸ್ಥಾನಕ್ಕೆ ಕುಸಿದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿ ನಮೀಬಿಯಾಗೆ 210 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್ ಕಲೆಹಾಕಿ ಆಲ್‌ಔಟ್ ಆಗಿದೆ.
ಭಾರತದ ಇನ್ನಿಂಗ್ಸ್: ಪರ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು. ವೇಗವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಸಂಜು ಸ್ಯಾಮ್ಸನ್ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 22 ರನ್ ಬಾರಿಸಿ ಎರಡನೇ ಓವರ್‌ನಲ್ಲೇ ಪೆವಿಲಿಯನ್ ಸೇರಿಕೊಂಡರೆ, ಇಶಾನ್ ಕಿಶನ್ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 61 ರನ್ ಬಾರಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ 25, ನಾಯಕ ಸೂರ್ಯಕುಮಾರ್ ಯಾದವ್ 12, ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 52 ರನ್ ಬಾರಿಸಿದರು. ಇನ್ನುಳಿದಂತೆ ಶಿವಮ್ ದುಬೆ 22 ರನ್‌ಗೆ ವಿಕೆಟ್ ಒಪ್ಪಿಸಿದರೆ, ರಿಂಕು ಸಿಂಗ್ ಕೇವಲ 1 ರನ್, ಅಕ್ಸರ್ ಪಟೇಲ್ ಡಕ್‌ಔಟ್, ಅರ್ಷ್‌ದೀಪ್ ಸಿಂಗ್ 2 ರನ್ ಹಾಗೂ ಯಾವುದೇ ರನ್ ಗಳಿಸದ ವರುಣ್ ಚಕ್ರವರ್ತಿ ಅಜೇಯರಾಗಿ ಉಳಿದರು.
ನಮೀಬಿಯಾ ಪರ ನಾಯಕ ಗೆರ್ಹಾರ್ಡ್ ಎರಾಸ್ಮನ್ ನಾಲ್ಕು ವಿಕೆಟ್, ಬೆನ್ ಶಿಕಾಂಗೋ, ಜೆಜೆ ಸ್ಮಿಟ್ ಹಾಗೂ ಬೆರ್ನಾರ್ಡ್ ಸ್ಕಾಲ್ಟ್ಜ್ ತಲಾ ಒಂದೊಂದು ವಿಕೆಟ್ ಪಡೆದರು.
ನಮೀಬಿಯಾ ಇನ್ನಿಂಗ್ಸ್: ತಂಡದ ಪರ ಲೌರೆನ್ ಸ್ಟೀನ್‌ಕಾಂಪ್ 29, ಜಾನ್ ಫ್ರೈಲಿಂಕ್ 22, ಜಾನ್ ನಿಕೊಲ್ 13, ಜೆರಾರ್ಡ್ ಎರಾಸ್ಮಸ್ 18, ಜೆಜೆ ಸ್ಮಿಟ್ ಡಕ್‌ಔಟ್, ಜೇನ್ ಗ್ರೀನ್ 11, ಮಲನ್ ಕ್ರುಗೆರ್ 5, ರುಬೆನ್ ಟ್ರಂಪೆಲ್‌ಮನ್ 6, ಬೆರ್ನಾರ್ಡ್ ಸ್ಕಾಲ್ಟ್ಜ್ 4, ಬೆನ್ ಶಿಕಾಂಗೊ ಡಕ್‌ಔಟ್ ಹಾಗೂ ಮ್ಯಾಕ್ಸ್ ಹಿಯೆಂಗೊ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಭಾರತದ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್, ಅಕ್ಸರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್, ಅರ್ಷ್‌ದೀಪ್ ಸಿಂಗ್, ಶಿವಮ್ ದುಬೆ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.

