ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಪಂದ್ಯಗಳು ಸದ್ಯ ನಡೆಯುತ್ತಿದ್ದು, ಭಾರತ ಸುತ್ತಿನ ಮೊದಲ ಪಂದ್ಯದಲ್ಲಿ ಹೀನಾಯ ಸೋಲುಂಡು ಭಾರೀ ಮುಖಭಂಗಕ್ಕೊಳಗಾಗಿದೆ.
ಗ್ರೂಪ್ ಹಂತದ ಎಲ್ಲ ನಾಲ್ಕು ಪಂದ್ಯಗಳಲ್ಲೂ ಗೆದ್ದು ಬೀಗಿದ್ದ ಭಾರತ ಸೂಪರ್ 8 ಹಂತದಲ್ಲಿನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲನ್ನು ಕಂಡು ಇದೀಗ ಸೆಮಿಫೈನಲ್ ಪ್ರವೇಶಿಸುವುದು ತೀರಾ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿಕೊಂಡಿದೆ.
ಉಳಿದೆರಡು ಪಂದ್ಯಗಳನ್ನು ಗೆದ್ದರೂ ಸಹ ಕಳಪೆ ನೆಟ್ ರನ್‌ರೇಟ್ ಇರುವ ಕಾರಣ ಇದೀಗ ಭಾರತ ಉಳಿದ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದ್ದು, ಈ ಕಾರಣಕ್ಕಾಗಿ ಭಾರತ ಕ್ರಿಕೆಟ್ ಪ್ರಿಯರಿಂದ ಭಾರೀ ಟೀಕೆಗಳನ್ನು ಎದುರಿಸುತ್ತಿದೆ.
ಅದರಲ್ಲೂ ಪಂದ್ಯದಲ್ಲಿ ಕಳಪೆ ನಾಯಕತ್ವ ತೋರಿದ ಸೂರ್ಯಕುಮಾರ್ ಯಾದವ್ ಹೆಚ್ಚಾಗಿ ಟ್ರೋಲ್‌ಗೆ ಒಳಗಾದರೆ ತನ್ನ ಮೈದಾನದಿಂದಾಚೆಗಿನ ನಡವಳಿಕೆಯಿಂದ ಹಾರ್ದಿಕ್ ಪಾಂಡ್ಯ ಟೀಕೆಗೊಳಗಾಗಿದ್ದಾರೆ.
ಅಹ್ಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಹಾರ್ದಿಕ್ ಪಾಂಡ್ಯ ತನ್ನ ಪ್ರೇಯಸಿ ಮಹಿಕಾ ಶರ್ಮಾ ಜತೆ ಕಾಣಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದೆ. ಹೀನಾಯ ಸೋಲು ಕಂಡ ಬಳಿಕ ಆಟಕ್ಕೆ ಬದ್ಧನಾಗಿರದೇ ಈ ರೀತಿ ಚಿಕ್ಕ ಮಕ್ಕಳ ಹಾಗೆ ಪ್ರೇಯಸಿ ಕೈಹಿಡಿದುಕೊಂಡು ಸುತ್ತುವ ಈತನಿಗೆ ಜವಾಬ್ದಾರಿ ಇಲ್ಲ ಎಂದಿದ್ದಾರೆ.
ಅದರಲ್ಲೂ ಚೆನ್ನೈಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಭೇಟಿಯಾಗಲು ಮಹಿಕಾ ಶರ್ಮಾ ಸಹ ಆಗಮಿಸಿದ್ದಾಳೆ. ಬಿಸಿಸಿಐ ಸ್ವತಃ ಆಟಗಾರರು ಯಾರೂ ತಮ್ಮ ಮಡದಿ ಹಾಗೂ ಪ್ರೇಯಸಿಯರನ್ನು ಕರೆತರುವಂತಿಲ್ಲ ಎಂದು ನಿಯಮ ವಿಧಿಸಿದ್ದು, ಪಾಂಡ್ಯ ಮಾತ್ರ ಇದನ್ನು ಪಾಲಿಸುತ್ತಿಲ್ಲ ಎಂದಿದ್ದಾರೆ. ಪಾಂಡ್ಯ ವಿಶ್ವಕಪ್ ಆಡಲು ಬಂದಿದ್ದಾರಾ ಅಥವಾ ಹನಿಮೂನ್‌ಗೆ ಬಂದಿದ್ದಾರಾ ಎಂಬುದು ಅರ್ಥವಾಗುತ್ತಿಲ್ಲ, ಪ್ರಪಂಚದಲ್ಲಿ ಯಾರೂ ಪ್ರೀತಿಸಿಯೇ ಇಲ್ಲ ಎನ್ನುವ ಹಾಗೆ ಪಾಂಡ್ಯ ಅತಿಯಾದ ವರ್ತನೆ ತೋರಿ ಶೋಕಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ವಿಡಿಯೊ ಹಂಚಿಕೊಂಡು ಕಿಡಿಕಾರಿದ್ದಾರೆ.

