ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 23ನೇ ಪಂದ್ಯದಲ್ಲಿ ಇಂಗ್ಲೆಂಡ್ ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ಕಂಡು ನಾಲ್ಕು ಅಂಕಗಳೊಂದಿಗೆ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 19.4 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲ್‌ಔಟ್ ಆಗಿ ಇಂಗ್ಲೆಂಡ್‌ಗೆ 153 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಇಂಗ್ಲೆಂಡ್ 18.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತು.
ಸ್ಕಾಟ್ಲೆಂಡ್ ಇನ್ನಿಂಗ್ಸ್: ತಂಡದ ಪರ ಜಾರ್ಜ್ ಮುನ್ಸೆ 4, ಮೈಕೆಲ್ ಜೋನ್ಸ್ 33, ಬ್ರಾಂಡನ್ ಮೆಕ್‌ಮುಲೆನ್ ಡಕ್‌ಔಟ್, ರಿಚಿ ಬೆರಿಂಗ್ಟನ್ 49, ಟಾಮ್ ಬ್ರೂಸ್ 24, ಮೈಕೆಲ್ ಲೀಸ್ಕ್ 1, ಮ್ಯಾಥ್ಯೂ ಕ್ರಾಸ್ 8, ಮಾರ್ಕ್ ವ್ಯಾಟ್ 2, ಬ್ರಾಡ್ ವೀಲ್ 2, ಬ್ರಾಡ್ ಕರಿ 2 ರನ್ ಹಾಗೂ ಓಲಿವರ್ ಡೇವಿಡ್‌ಸನ್ ಅಜೇಯ 20 ರನ್ ಬಾರಿಸಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್ ಮೂರು ವಿಕೆಟ್, ಲಿಯಾಮ್ ಡಾಸನ್ ಹಾಗೂ ಜೋಫ್ರಾ ಆರ್ಚರ್ ಎರಡು ವಿಕೆಟ್, ಜೇಮಿ ಓವರ್ಟನ್ ಹಾಗೂ ಸ್ಯಾಮ್ ಕರನ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಮತ್ತೊಮ್ಮೆ ವಿಫಲರಾದರು. ಸಾಲ್ಟ್ 2 ರನ್‌ಗೆ ವಿಕೆಟ್ ಒಪ್ಪಿಸಿದರೆ, ಬಟ್ಲರ್ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ಜೇಕಬ್ ಬೆಥೆಲ್ ಹಾಗೂ ಟಾಮ್ ಬ್ಯಾಂಟನ್ 66 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಬೆಥೆಲ್ 32 ರನ್ ಗಳಿಸಿ ಔಟ್ ಆದರೆ, ನಂತರ ಕಣಕ್ಕಿಳಿದ ನಾಯಕ ಹ್ಯಾರಿ ಬ್ರೂಕ್ 4 ರನ್, ಸ್ಯಾಮ್ ಕರನ್ 28 ರನ್ ಹಾಗೂ ವಿಲ್ ಜ್ಯಾಕ್ಸ್ ಅಜೇಯ 16 ಮತ್ತು ಟಾಮ್ ಬ್ಯಾಂಟನ್ ಅಜೇಯ 63 ರನ್ ಬಾರಿಸಿದರು.
ಸ್ಕಾಟ್ಲೆಂಡ್ ಪರ ಬ್ರಾಂಡನ್ ಮೆಕ್‌ಮುಲೆನ್, ಬ್ರಾಡ್ ಕರಿ, ಬ್ರಾಡ್ ವೀಲ್, ಮೈಕೆಲ್ ಲೀಸ್ಕ್ ಹಾಗೂ ಓಲಿವರ್ ಡೇವಿಡ್‌ಸನ್ ತಲಾ ಒಂದೊಂದು ವಿಕೆಟ್ ಪಡೆದರು.

