ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯ ಗ್ರೂಪ್ ಹಂತದ 27ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ನಾಳೆ ( ಫೆಬ್ರವರಿ 15 ) ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಲ್ಲಿಯವರೆಗೂ ತಲಾ ಎರಡು ಪಂದ್ಯಗಳನ್ನಾಡಿದ್ದು, ಎರಡೂ ತಂಡಗಳು ಎರಡರಲ್ಲಿಯೂ ಗೆದ್ದಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಹೀಗಾಗಿ ಈ ಪಂದ್ಯ ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭಗೊಂಡಿವೆ. ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ತಮ್ಮ ತಂಡದ ಆಟಗಾರ ಉಸ್ಮಾನ್ ತಾರಿಖ್ ಬೌಲಿಂಗ್ ವೈಖರಿ ಕುರಿತು ಹರಿದಾಡುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ.
ಹೌದು, ಟೂರ್ನಿಯಲ್ಲಿ ಉಸ್ಮಾನ್ ತಾರಿಖ್ ಬೌಲಿಂಗ್ ಮಾಡುವಾಗ ಚೆಂಡನ್ನು ಬಿಡುಗಡೆ ಮಾಡಲು ಸಮಯ ತೆಗೆದುಕೊಂಡು ನಿಲ್ಲಿಸಿ ಚೆಂಡನ್ನು ಎಸೆಯುತ್ತಿರುವುದನ್ನು ಅನಧಿಕೃತ ಹಾಗೂ ಮೋಸದ ಆಟ ಎಂದು ಟೀಕೆಗಳು ಹರಿದಾಡುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್ ಆಘಾ ‘ಐಸಿಸಿ ಆತನನ್ನು ಎರಡು ಬಾರಿ ಪರೀಕ್ಷಿಸಿ ಅನುಮತಿ ನೀಡಿದೆ. ಆದರೂ ಈ ಟೀಕೆಗಳು ಯಾಕೆ ಗೊತ್ತಿಲ್ಲ. ಏನೇ ಹೇಳಿ ಎಷ್ಟೇ ಟೀಕೆ ಮಾಡಿದರೂ ಅದಕ್ಕೆ ಉಸ್ಮಾನ್ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆತ ಆಟವಾಡಲು ಶುರು ಮಾಡಿದಾಗಿನಿಂದ ಈ ರೀತಿಯ ಟೀಕೆಗಳು ಬರುತ್ತಲೇ ಇವೆ, ಅದಕ್ಕೆ ಆತ ಹೊಂದಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.

