HomeLatest NewsT20 World Cup 2026: ತವರಿನಲ್ಲಿ ಲಂಕಾಗೆ ಭಾರೀ ಮುಖಭಂಗ; ಸಾಮಾನ್ಯ ಗುರಿ ಬೆನ್ನಟ್ಟಲಾಗದೇ ಇಂಗ್ಲೆಂಡ್...

T20 World Cup 2026: ತವರಿನಲ್ಲಿ ಲಂಕಾಗೆ ಭಾರೀ ಮುಖಭಂಗ; ಸಾಮಾನ್ಯ ಗುರಿ ಬೆನ್ನಟ್ಟಲಾಗದೇ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ 51 ರನ್‌ಗಳ ಗೆಲುವನ್ನು ದಾಖಲಿಸಿದೆ.

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಇಂಗ್ಲೆಂಡ್ ಶ್ರೀಲಂಕಾ ಬೌಲಿಂಗ್ ದಾಳಿಗೆ ಪರದಾಡಿದ್ದು, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿ ಶ್ರೀಲಂಕಾಗೆ ಗೆಲ್ಲಲು 147 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು.

ಇಂಗ್ಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಭರ್ಜರಿ ಬೌಲಿಂಗ್ ಮಾಡಿ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಲಿದೆ ಎಂಬ ಸಾಮರ್ಥ್ಯ ಹೊಂದಿದ್ದ ಶ್ರೀಲಂಕಾ 16.4 ಓವರ್‌ಗಳಲ್ಲಿ ಕೇವಲ 94 ರನ್‌ಗಳಿಗೆ ಆಲ್‌ಔಟ್ ಆಗಿ ಭಾರೀ ಮುಖಭಂಗ ಅನುಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಗ್ಲೆಂಡ್ ಇನ್ನಿಂಗ್ಸ್: ಲಂಕಾ ಬೌಲಿಂಗ್ ದಾಳಿಗೆ ನಾಲ್ಕನೇ ಓವರ್‌ನಲ್ಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಾಲು ಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಹೀಗೆ ಇಡೀ ತಂಡ ಲಂಕಾ ಎದುರು ಮಂಕಾದರೆ ಮತ್ತೊಂದೆಡೆ ಫಿಲ್ ಸಾಲ್ಟ್ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 62 ರನ್ ಬಾರಿಸಿ ತಂಡ ಅಲ್ಪಮೊತ್ತಕ್ಕೆ ಕುಸಿದು ಮುಖಭಂಗಕ್ಕೊಳಗಾಗುವುದನ್ನು ತಪ್ಪಿಸಿದರು. ಸಾಲ್ಟ್ ಹೊರತುಪಡಿಸಿದರೆ ಇಂಗ್ಲೆಂಡ್‌ನ ಇನ್ಯಾವ ಆಟಗಾರನೂ ಸಹ ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಲಿಲ್ಲ.

ಜೋಸ್ ಬಟ್ಲರ್ 7 ರನ್ ಗಳಿಸಿದರೆ, ಜೇಕಬ್ ಬೆಥೆಲ್ 3, ಟಾಮ್ ಬ್ಯಾಂಟನ್ 6, ನಾಯಕ ಹ್ಯಾರಿ ಬ್ರೂಕ್ 14, ಸ್ಯಾಮ್ ಕರನ್ 11, ವಿಲ್ ಜ್ಯಾಕ್ಸ್ 21, ಲಿಯಾಮ್ ಡಾಸನ್ 6, ಜೋಫ್ರಾ ಆರ್ಚರ್ ಡಕ್‌ಔಟ್, ಆದಿಲ್ ರಶೀದ್ ಅಜೇಯ 1 ರನ್ ಹಾಗೂ ಜೇಮಿ ಓವರ್ಟನ್ ಅಜೇಯ 10 ರನ್ ದಾಖಲಿಸಿದರು.

ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ ಮೂರು ವಿಕೆಟ್, ದಿಲ್ಶನ್ ಮಧುಶಂಕ ಹಾಗೂ ಮಹೀಶ್ ತೀಕ್ಷಣ ತಲಾ ಎರಡು ವಿಕೆಟ್ ಪಡೆದರೆ, ದುಷ್ಮಂತ ಚಮೀರ ಒಂದು ವಿಕೆಟ್ ಪಡೆದರು.

ಶ್ರೀಲಂಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮೂರನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡ ಲಂಕಾ ನಾಲ್ಕನೇ ಓವರ್‌ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಪವನ್ ರತ್ನಾಯಕೆ ವಿಕೆಟ್ ಕಳೆದುಕೊಂಡಿತು. ಮೆಂಡಿಸ್ 4 ರನ್ ಗಳಿಸಿದರೆ, ಪವನ್ ಡಕ್‌ಔಟ್ ಆದರು. ಬೆನ್ನಲ್ಲೇ 6 ರನ್ ಗಳಿಸಿದ್ದ ಕಮಿಲ್ ಮಿಷಾರಾ ಸಹ ಪೆವಿಲಿಯನ್ ಸೇರಿಕೊಂಡರು. ಹೀಗೆ ಕೇವಲ 22 ರನ್‌ಗೆ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡ ಲಂಕಾ ಭಾರೀ ಹಿನ್ನಡೆಗೊಳಗಾಯಿತು. ಬೆನ್ನಲ್ಲೇ 10 ರನ್ ಗಳಿಸಿದ್ದ ದುನಿತ್ ವೆಲ್ಲಲಾಗೆ ಸಹ ಔಟ್ ಆಗಿ ಪವರ್‌ಪ್ಲೇನಲ್ಲೇ ಲಂಕಾ ತನ್ನ ಅರ್ಧ ಬಳಗ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಕಮಿನ್ದು ಮೆಂಡಿಸ್ 13, ದುಶನ್ ಹೇಮಂತ 5 ರನ್ ಗಳಿಸಿದರೆ, ಕೆಲ ಕಾಲ ಹೋರಾಡಿದ ನಾಯಕ ದಸುನ್ ಶಣಕ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಪಂದ್ಯ ಆಂಗ್ಲರ ಕೈ ಸೇರಿತ್ತು. ಇನ್ನುಳಿದಂತೆ ದುಷ್ಮಂತ ಚಮೀರ 6, ದಿಲ್ಶನ್ ಮಧುಶಂಕ ಡಕ್‌ಔಟ್ ಹಾಗೂ ಮಹೀಶ ತೀಕ್ಷಣ ಅಜೇಯ 10 ರನ್ ಗಳಿಸಿದರು.

ಇಂಗ್ಲೆಂಡ್ ಪರ ವಿಲ್ ಜ್ಯಾಕ್ಸ್ ಮೂರು ವಿಕೆಟ್ ಪಡೆದು ಮಿಂಚಿದರು. ಶ್ರೀಲಂಕಾದ ಆರಂಭಿಕರ ಎರಡು ವಿಕೆಟ್‌ಗಳನ್ನು ಜೋಫ್ರಾ ಆರ್ಚರ್ ಪಡೆದರೆ, ನಂತರದ ಮೂರು ವಿಕೆಟ್‌ಗಳನ್ನು ವಿಲ್ ಜ್ಯಾಕ್ಸ್ ಪಡೆದು ಲಂಕಾ ಪತನಕ್ಕೆ ಭದ್ರ ಬುನಾದಿ ಹಾಕಿದರು. ಇನ್ನುಳಿದಂತೆ ಲಿಯಾಮ್ ಡಾಸನ್ ಹಾಗೂ ಆದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದರೆ, ಜೇಮಿ ಓವರ್ಟನ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular