ನವದೆಹಲಿ: ಗುರುಗ್ರಾಮದಲ್ಲಿ ತನ್ನ ಲಿವ್-ಇನ್ ಪಾರ್ಟ್ನರ್ ನಿಂದ ನಡೆದ ಹಿಂಸಾಚಾರದ ಬಗ್ಗೆ ತ್ರಿಪುರಾದ 19 ವರ್ಷದ ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹದಿಹರೆಯದ ಬಾಲಕಿ, ಆರೋಪಿ ತನ್ನ ಖಾಸಗಿ ಭಾಗಗಳಿಗೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ಶಿವಂ(19) ತನ್ನ ತಲೆಗೆ ಬಾಟಲಿಯಿಂದ ಹೊಡೆದು, ಮನೆಯ ಪೀಠೋಪಕರಣಗಳಿಗೆ ಒಡೆದು, ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಗುರುಗ್ರಾಮ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಹಿಂಸಾಚಾರ ಸತತ ಮೂರು ದಿನಗಳ ಕಾಲ ಮುಂದುವರೆದಿದೆ ಮತ್ತು ಮದುವೆಯ ನೆಪದಲ್ಲಿ ತನ್ನ ಸಂಗಾತಿ ತನ್ನ ಮೇಲೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ಗುರುಗ್ರಾಮದಲ್ಲಿ ಓದುತ್ತಿರುವ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿನಿ ಫೆಬ್ರವರಿ 19 ರಂದು ತಮ್ಮ ವಿವಾಹದ ಬಗ್ಗೆ ನಡೆದ ವಾಗ್ವಾದದ ನಂತರ ತನ್ನ ಸಂಗಾತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾಳೆ.
ಗಂಭೀರ ಸ್ಥಿತಿಯಲ್ಲಿರುವ ಆಕೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ದೆಹಲಿ ನಿವಾಸಿ ಶಿವಂ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ಸೆಪ್ಟೆಂಬರ್ 2025 ರಲ್ಲಿ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಶಿವಂ ಅವರನ್ನು ಭೇಟಿಯಾದಳು ಮತ್ತು ತಿಂಗಳುಗಳ ನಂತರ ಗುರುಗ್ರಾಮ್‌ನ ಸೆಕ್ಟರ್ 69 ರಲ್ಲಿ ಅವನೊಂದಿಗೆ ನೆಲೆಸಿದಳು. ಕುಟುಂಬಗಳ ನಡುವೆ ವಿವಾಹ ಮಾತುಕತೆಗಳು ಪ್ರಾರಂಭವಾದವು.
ಜೋಡಿಯ ನಡುವಿನ ಅವರ ವಿವಾಹ ಯೋಜನೆಗಳ ಕುರಿತು ತಡರಾತ್ರಿ ನಡೆದ ವಾದವು ಹಿಂಸಾಚಾರಕ್ಕೆ ಕಾರಣವಾಯಿತು. ಮಹಿಳೆಗೆ ಅನೇಕ ಗಂಭೀರ ಗಾಯಗಳಾಗಿವೆ ಎಂದು ವೈದ್ಯಕೀಯ ಪರೀಕ್ಷೆಗಳು ತಿಳಿಸಿವೆ ಎಂದು ಪೊಲೀಸರು ಹೇಳಿದ್ದಾರೆ.
ಗುರುಗ್ರಾಮ್ ಡಿಸಿಪಿ(ದಕ್ಷಿಣ) ಹಿತೇಶ್ ಯಾದವ್ ಅವರು, ಯುವತಿಯನ್ನು ಮೊದಲು ಗುರುಗ್ರಾಮ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಗಾಯಗಳ ಗಂಭೀರತೆಯಿಂದಾಗಿ ಆಕೆಯನ್ನು ಏಮ್ಸ್ ಮತ್ತು ನಂತರ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದರು.
ಮಹಿಳೆಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನನ್ನ ಮಗಳು ನನಗೆ ಕರೆ ಮಾಡಿ ಹಲ್ಲೆಯಿಂದ ರಕ್ಷಿಸುವಂತೆ ಬೇಡಿಕೊಂಡಳು ತನ್ನ ಮಗಳು ಆರೋಪಿಯೊಂದಿಗೆ ವಾಸಿಸುತ್ತಿರುವುದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅತ್ಯಾಚಾರ ಮತ್ತು ಕೊಲೆಯತ್ನದ ಆರೋಪಗಳನ್ನು ಸಹ ಸೇರಿಸಬೇಕೆಂದು ತಾಯಿ ಒತ್ತಾಯಿಸಿದ್ದಾರೆ.
ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ವೈದ್ಯಕೀಯ ಆಧಾರದ ಮೇಲೆ ಹೆಚ್ಚುವರಿ ಆರೋಪಗಳನ್ನು ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

