ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯಲ್ಲಿ ಸದ್ಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯದ ಹಂತದ ಸನಿಹಕ್ಕೆ ಬಂದಿದ್ದು, ಪೈಪೋಟಿ ಹೆಚ್ಚಾಗಿದೆ. ಇನ್ನು ಎ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ತಮ್ಮ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳನ್ನು ಪಡೆದು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ.
ಹೀಗೆ ಎ ಗುಂಪಿನ ಅಂಕಪಟ್ಟಿಯಲ್ಲಿ ಟಾಪ್‌ನಲ್ಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿನ ತಮ್ಮ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಗೆಲ್ಲುವ ತಂಡ ಸೂಪರ್ 8 ಸುತ್ತಿಗೆ ಟಿಕೆಟ್ ಪಡೆದುಕೊಳ್ಳಲಿದ್ದು , ಹೀಗಾಗಿ ಭಾನುವಾರ ( ಫೆಬ್ರವರಿ 15 ) ನಡೆಯಲಿರುವ ಇತ್ತಂಡಗಳ ನಡುವಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.
ಕೇವಲ ಈ ಕಾರಣಕ್ಕಾಗಿ ಮಾತ್ರವಲ್ಲದೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಬದ್ಧ ವೈರಿಗಳ ಕಾಳಗವೆಂಬ ಕಾರಣಕ್ಕೆ ಹೆಚ್ಚು ಕ್ರೇಜ್ ಹುಟ್ಟುಹಾಕಿದ್ದು, ಯಾವ ತಂಡ ಈ ಬಾರಿ ಗೆಲ್ಲಲಿದೆ ಎಂಬ ಪ್ರಶ್ನೆ ಎದ್ದಿದೆ.
ಹೀಗಾಗಿ ಈ ಪಂದ್ಯದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಯುಟ್ಯೂಬ್ ಚರ್ಚೆಯ ವೇಳೆ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಹ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಈ ಬಾರಿ ಪಾಕ್ ಪರ ಸ್ಪಿನ್ನರ್ ಉಸ್ಮಾನ್ ತಾರಿಖ್ ಮಾಡುವ ವಿಭಿನ್ನ ಬೌಲಿಂಗ್ ವೈಖರಿ ಬಗ್ಗೆ ವಿಶೇಷವಾಗಿ ಮಾತನಾಡಿರುವ ಅಶ್ವಿನ್ ಭಾರತದ ಆಟಗಾರರಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಒಂದು ವೇಳೆ ಭಾರತದ ವಿರುದ್ಧದ ಪಂದ್ಯದಲ್ಲಿಯೂ ಸಹ ಉಸ್ಮಾನ್ ತಾರಿಖ್ ಚೆಂಡನ್ನು ಬಿಡುಗಡೆ ಮಾಡುವ ಮುನ್ನ ಕೆಲ ಸಮಯ ತೆಗೆದುಕೊಂಡರೆ ಆಗ ಭಾರತದ ಆಟಗಾರರು ಬದಿಗೆ ಸರಿದು ಬೌಲರ್ ಬೌಲಿಂಗ್ ಮಾಡುವುದನ್ನು ನಿಲ್ಲಿಸುತ್ತಿದ್ದಾನೆ ಎಂದುಕೊಂಡೆ ಎಂದು ಹೇಳಿದರೆ ಆಗ ಅದು ಅಂಪೈರ್‌ಗೆ ತಲೆನೋವಾಗಿ ಪರಿಣಮಿಸಲಿದೆ, ನಾನು ತಂಡದಲ್ಲಿದ್ದರೆ ಹಾಗೆಯೇ ಮಾಡುತ್ತಿದ್ದೆ ಎಂದು ಉಪಾಯವನ್ನು ನೀಡಿದ್ದಾರೆ.

