ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಗಣೇಶೋತ್ಸವ ಆಚರಣೆ ಸಮಿತಿ ಯುವಕರನ್ನು ಕರೆದು ಧಮ್ಕಿ ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಪ್ರತಾಪ್ ಸಿಂಹ ಪರ ಬಿಜೆಪಿಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಎರಡು ಪ್ರತಿಭಟನೆ ಬೆನ್ನಲ್ಲೇ ಟಿ.ನರಸಿಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸಿದ್ದ ಇನ್ಸ್ ಪೆಕ್ಟರ್ ಧನಂಜಯ್ ಗಣೇಶ ಮಂಡಳಿ ಯುವಕರನ್ನು ಠಾಣೆಗೆ ಕರೆಸಿ ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡುವುದು, ಗಲಾಟೆ ಮಾಡುವುದು ಮಾಡಿದರೆ ಗ್ರಹಚಾರ ಬಿಡಿಸುತ್ತೇನೆ. ಯಾವ ಕಾರಣಕ್ಕೂ ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗುವಂತಿಲ್ಲ. ನಾವು ಸೂಚಿಸಿದ ಮಾರ್ಗದಲ್ಲೇ ಸಾಗಬೇಕು ಎಂದು ಎಚ್ಚರಿಕೆ ನೀಡಿದ್ದರು.
ಮಸೀದಿ ಬಳಿ ಮೆರವಣಿಗೆ ಹೋಗಬಾರದು, ಅಲ್ಲಿ ಪಟಾಕಿ ಸಿಡಿಸಿ, ಕುಣಿದು ಘೋಷಣೆ ಕೂಗುವಂತದ್ದು ಆಗಬಾರದು. ಪೊಲೀಸರು ಯಾವ ಮಾರ್ಗದಲ್ಲಿ ಹೋಗಬೇಕೆಂದು ಸೂಚಿಸುತ್ತಾರೋ ಅದೇ ಮಾರ್ಗದಲ್ಲಿ ಮೆರವಣಿಗೆ ಸಾಗಬೇಕು. ನಮ್ಮ ಆಚರಣೆ ನೋಡಿ ಬೇರೆಯವರು ಗೌರವ ಕೊಡಬೇಕು ಹೊರತು ಗಲಾಟೆಗಳಾಗಬಾರದು. ನಮ್ಮ ಧರ್ಮ ನಮಗೆ ಹೆಚ್ಚು, ಅವರ ಧರ್ಮ ಅವರಿಗೆ ಹೆಚ್ಚು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಘಟನೆ ನಡೆದರೆ ಮಾತನಾಡಲ್ಲ, ಮಾಡಿ ತೋರಿಸುತ್ತೇವೆ. ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದುಇದ್ದರು.
ಇನ್ಸ್‌ಪೆಕ್ಟರ್ ಧನಂಜಯ್ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇನ್ಸ್ ಪೆಕ್ಟರ್ ಅಮಾಯಕ ಯುವಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಹಬ್ಬ ಆಚರಿಸಲು ನಮಗೆ ಪೊಲೀಸರು ಧಮ್ಕಿ ಹಾಕುವಂತಹ ಸ್ಥಿತಿ ರಾಜ್ಯದಲ್ಲಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು.
ಅಸಹಾಯಕರ ಮೇಲೆ ಪೌರುಷ ತೋರಿಸುವ ಬದಲು, ನನ್ನೊಂದಿಗೆ ಪೌರುಷ ತೋರಿಸಿ ಎಂದು ನೇರವಾಗಿ ಇನ್ಸ್ ಪೆಕ್ಟರ್ ಗೆ ಪ್ರತಾಪ್ ಸಿಂಹ ಸವಾಲು ಹಾಕಿದ್ದರು. ಇನ್ನೊಂದು ಸಾರಿ ಅಂತಹ ಮಾತು ನಿಮ್ಮ ಬಾಯಿಂದ ಬಂದರೆ, ನಿಮ್ಮ ಠಾಣೆಗೆ ಬಂದು ನುಗ್ಗುತ್ತೇನೆ ಎಂದು ಎಚ್ಚರಿಸಿದ್ದರು.
ಅಸಹಾಯಕ ಯುವಕರ ಮೇಲೆ ಪೌರುಷ ತೋರಿಸುವ ಬದಲು, ನಾನು ಬಂದಾಗ ನನ್ನೊಂದಿಗೆ ಪೌರುಷ ತೋರಿಸಿ . ಗಣೇಶೋತ್ಸವದ ಸಂದರ್ಭದಲ್ಲಿ ಮಾತ್ರ ಮಸೀದಿಗಳ ಮುಂದೆ ಪೊಲೀಸ್ ಭದ್ರತೆ ಇರುತ್ತದೆ, ಆದರೆ ಮೊಹರಂ ಅಥವಾ ಈದ್ ಮೆರವಣಿಗೆಗಳ ಸಂದರ್ಭದಲ್ಲಿ ದೇವಸ್ಥಾನಗಳ ಮುಂದೆ ಇದೇ ರೀತಿಯ ಭದ್ರತೆ ಯಾಕೆ ಇರುವುದಿಲ್ಲ? ಈ ನಿರ್ಬಂಧಗಳು ಏಕಪಕ್ಷೀಯವಾಗಿವೆ. ಇನ್ಸ್ ಪೆಕ್ಟರ್ ಧನಂಜಯ್ ಅವರ ಹೇಳಿಕೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ನಾಯಕರು ಕೂಡ ಇನ್ಸ್ ಪೆಕ್ಟರ್ ಧನಂಜಯ್ ಹೇಳಿಕೆಗೆ ಕೆಂಡ ಕಾರಿದ್ದರು. ನಮ್ಮ ಹಬ್ಬಕ್ಕೆ ಕಂಡಿಷನ್ ಹಾಕುವ ಪೊಲೀಸ್ ಅಧಿಕಾರಿಗಳು ಮೊಹರಮ್ ಮೆರವಣಿಗೆ ವೇಳೆ ಯಾಕೆ ಹಾಕುವುದಿಲ್ಲ? ಎಂದು ಪ್ರಶ್ನಿಸಿದ್ದರು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಟಿ.ನರಸೀಪುರದಲ್ಲಿ ಒಂದೆಡೆ ದಲಿತ ಸಂಘಟನೆಗಳು ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ಸ್ ಪೆಕ್ಟರ್ ಗೆ ಆವಾಜ್ ಹಾಕುವ ಮೂಲಕ ಪೊಲೀಸರ ಧ್ವನಿ ಹತ್ತಿಕ್ಕುವ ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಪ್ರತಾಪ್ ಸಿಂಹ ಹೇಳಿಕೆಗೆ ಬೆಂಬಲ ಸೂಚಿಸಿ, ಇನ್ಸ್ ಪೆಕ್ಟರ್ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಾಪ್ ಸಿಂಹ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

