ಬೆಂಗಳೂರು : ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಕೇವಲ ಒಂದು ಮೌಢ್ಯ. ಅಂತಹ ನಂಬಿಕೆಗಳಲ್ಲಿ ನನಗೆ ವಿಶ್ವಾಸವಿಲ್ಲ. ನಾನು ಪದೇ ಪದೇ ಈ ಜಿಲ್ಲೆಗೆ ಭೇಟಿ ನೀಡುತ್ತಿರುವುದೇ ಇದಕ್ಕೆ ಸಾಕ್ಷಿ. ಇಲ್ಲಿಗೆ ಬರುವುದರಿಂದ ಕುರ್ಚಿ ಹೋಗುವುದಿಲ್ಲ, ಬದಲಾಗಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ನಾನು ಪ್ರಾಸಂಗಿಕವಾಗಿ ಹೇಳಿದ್ದೇನೆ,” ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಒಂದು ಮೌಢ್ಯ. ಇಂತಹ ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ ಚಾಮರಾಜನಗರಕ್ಕೆ ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಅಷ್ಟೆ.
ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಸರ್ಕಾರ ಆಕಸ್ಮಿಕ ಸಾವುಗಳಿಗೆ ನೀಡುವ ಪರಿಹಾರದ ಬಗ್ಗೆ ತಪ್ಪು ಕಲ್ಪನೆಯಿಂದ ಪತ್ರ ಬರೆದಿದ್ದಾರೆ. ಎಲ್ಲರಿಗೂ ಪರಿಹಾರ ನೀಡಲಾಗುತ್ತಿದೆ, ನಮ್ಮ ಗಮನಕ್ಕೆ ಬಂದರೆ ಪರಿಹಾರ ನೀಡುತ್ತೇವೆ. ಶಾಸಕರು ಕೇಳಿದರೂ ಖಂಡಿತ ಕೊಡುತ್ತೇವೆ.
ತೃತೀಯ ಭಾಷೆಗೆ ಹಿಂದಿನ ವರ್ಷಗಳಂತೆಯೇ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಬೇಕೆಂದು ಉಚ್ಚ ನ್ಯಾಯಾಲಯ ಹೇಳಿದ್ದು, ಈ ಸಂಬಂಧ ಮುಂದಿನ ತೀರ್ಮಾನ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ. ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುವುದು ಎಂದರು.

