ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಯೊಬ್ಬರು ಕಂಪನಿಯ ಕ್ರೆಡಿಟ್ ಕಾರ್ಡ್ ಬಳಸಿ 27 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ತನ್ನ ಮೇಲಧಿಕಾರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹೌದು. ಕಚೇರಿಯ ಕ್ರೆಡಿಟ್ ಕಾರ್ಡ್ ಬಳಸಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡ ಐಟಿ ಉದ್ಯೋಗಿಯೊಬ್ಬ, ಹಣ ವಾಪಸ್ ಕೇಳಿದ ಮೇಲಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಚೀನಾ ಮತ್ತು ಪಾಕಿಸ್ತಾನದ ವ್ಯಕ್ತಿಗಳ ಬೆದರಿಕೆಯಿಂದಾಗಿ ತಾನು ಹಣ ಬಳಸಿದ್ದಾಗಿ ಸಮರ್ಥಿಸಿಕೊಂಡಿರುವ ಈ ಟೆಕ್ಕಿ ವಿರುದ್ಧ ಈಗ ಪೊಲೀಸ್ ತನಿಖೆ ಆರಂಭವಾಗಿದೆ.
ಅಧಿಕೃತ ಕೆಲಸಕ್ಕಾಗಿ ನೀಡಲಾಗಿದ್ದ ಕ್ರೆಡಿಟ್ ಕಾರ್ಡ್ ಬಳಸಿ ಒಟ್ಟು 27,01,139 ರೂ. ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಲಾಗಿದೆ.ಈ ಅಕ್ರಮ ವ್ಯವಹಾರಗಳು ಅಕ್ಟೋಬರ್ 2023 ರಿಂದ ಜನವರಿ 2024 ರ ನಡುವೆ ನಡೆದಿದೆ.ಕಂಪನಿಯು ಹಣವನ್ನು ಮರಳಿ ಕೇಳಿದಾಗ, ಆತ ತನ್ನ ಮೇಲಧಿಕಾರಿಗೆ ಅಶ್ಲೀಲ ವಿಷಯಗಳನ್ನು (Obscene content) ಕಳುಹಿಸಿ ಬೆದರಿಸಲು ಯತ್ನಿಸಿದ್ದಾನೆ.
ಆರೋಪಿಯ ಸಮರ್ಥನೆ: ಚೀನಾ ಮತ್ತು ಪಾಕಿಸ್ತಾನದ ಅಪರಿಚಿತ ವ್ಯಕ್ತಿಗಳು ತನಗೆ ಬೆದರಿಕೆ ಹಾಕಿದ್ದರಿಂದ ಈ ಹಣವನ್ನು ಬಳಸಬೇಕಾಯಿತು ಎಂದು ಆತ ಇಮೇಲ್ ಮೂಲಕ ಹಾರಿಕೆಯ ಉತ್ತರ ನೀಡಿದ್ದಾನೆ.
ಹಣ ಮರುಪಾವತಿ ವೈಫಲ್ಯ: ಆರಂಭದಲ್ಲಿ ಕಂತುಗಳಲ್ಲಿ ಹಣವನ್ನು ಮರಳಿ ನೀಡುವುದಾಗಿ ಭರವಸೆ ನೀಡಿದ್ದರೂ, ಆತ ಯಾವುದೇ ಹಣವನ್ನು ಪಾವತಿಸಿಲ್ಲ.ಕಂಪನಿಯು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

