ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವ ಗ್ರಾಹಕರಿಗೆ ಒಂದು ಕಡೆ ಆರ್ಡರ್ ಮಾಡುವುದೇ ಖುಷಿಯಾದರೆ, ಮತ್ತೊಂದು ಕಡೆ ಅದರ ಮೇಲೆ ಬೀಳುವ ಹೆಚ್ಚುವರಿ ಶುಲ್ಕಗಳೇ ದೊಡ್ಡ ತಲೆನೋವು. ಬೆಂಗಳೂರಿನ ಮಹಿಳೆಯೊಬ್ಬರು ಈ ವಿಚಾರವಾಗಿ ಮಾಡಿರುವ ಪ್ರಯೋಗವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ವಿಗ್ಗಿ, ಜೊಮಾಟೊ ಮತ್ತು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಂದಿರುವ ‘ಓನ್ಲಿ’ (Ownly) ಎಂಬ ಆ್ಯಪ್‌ನಲ್ಲಿ ಏಕಕಾಲಕ್ಕೆ ಒಂದೇ ಪಿಜ್ಜಾವನ್ನು ಆರ್ಡರ್ ಮಾಡುವ ಮೂಲಕ ಅವರು ಬೆಲೆ ವ್ಯತ್ಯಾಸವನ್ನು ಬಯಲಿಗೆಳೆದಿದ್ದಾರೆ.
ಶ್ರೇಯಾ ಝಾ ಎಂಬುವವರು ಜೆಪಿ ನಗರದ ಪಿಜ್ಜಾ ಹಟ್‌ನಿಂದ 119 ರೂಪಾಯಿ ಬೆಲೆಯ ಕಾರ್ನ್ ಪಿಜ್ಜಾವನ್ನು ಮೂರು ಆ್ಯಪ್‌ಗಳಲ್ಲಿ ಹೋಲಿಕೆ ಮಾಡಿದ್ದಾರೆ. ಜೊಮಾಟೊದಲ್ಲಿ ಈ ಪಿಜ್ಜಾ ಆರ್ಡರ್ ಮಾಡಿದಾಗ ಪ್ಯಾಕೇಜಿಂಗ್ ಶುಲ್ಕ, ಡೆಲಿವರಿ ಫೀಸ್ ಮತ್ತು ಪ್ಲಾಟ್‌ಫಾರ್ಮ್ ಫೀಸ್ ಸೇರಿ ಒಟ್ಟು ಮೊತ್ತ 191 ರೂಪಾಯಿ ತಲುಪಿದೆ. ಇನ್ನು ಸ್ವಿಗ್ಗಿಯಲ್ಲಿ 50 ರೂಪಾಯಿ ಡಿಸ್ಕೌಂಟ್ ನೀಡಿದರೂ ಸಹ, ಉಳಿದ ತೆರಿಗೆಗಳು ಮತ್ತು ಡೆಲಿವರಿ ಶುಲ್ಕ ಸೇರಿದಾಗ ಅದರ ಬೆಲೆ 180 ರೂಪಾಯಿ ಆಗಿದೆ.
ಆದರೆ ರಾಪಿಡೋ ಸಂಸ್ಥೆಯು ಆರಂಭಿಸಿರುವ ಹೊಸ ಫುಡ್ ಡೆಲಿವರಿ ಆ್ಯಪ್ ‘ಓನ್ಲಿ’ ಎಲ್ಲರ ಗಮನ ಸೆಳೆದಿದೆ. ಓನ್ಲಿಯಲ್ಲಿ ಅದೇ 119 ರೂಪಾಯಿ ಬೆಲೆಯ ಪಿಜ್ಜಾ ಕೇವಲ 125 ರೂಪಾಯಿಗೆ ಗ್ರಾಹಕರಿಗೆ ಲಭ್ಯವಾಗಿದೆ. ಇಲ್ಲಿ ಯಾವುದೇ ಗುಪ್ತ ಶುಲ್ಕಗಳು ಅಥವಾ ಹೆಚ್ಚಿನ ಡೆಲಿವರಿ ಫೀಸ್ ಇಲ್ಲದಿರುವುದು ವಿಶೇಷ. “ನೀವು ನೋಡುವುದನ್ನೇ ನೀವು ಪಾವತಿಸುತ್ತೀರಿ” ಎಂಬ ಧ್ಯೇಯದೊಂದಿಗೆ ಮಾರ್ಚ್ 3 ರಂದು ಬೆಂಗಳೂರಿನಲ್ಲಿ ಈ ಸೇವೆ ಅಧಿಕೃತವಾಗಿ ಚಾಲನೆಗೊಂಡಿದೆ.
ಪ್ರಸ್ತುತ ಸ್ವಿಗ್ಗಿ ಮತ್ತು ಜೊಮಾಟೊ ಸಂಸ್ಥೆಗಳು ಪ್ರತಿ ಆರ್ಡರ್ ಮೇಲೆ ಹೆಚ್ಚಿನ ಕಮಿಷನ್ ಮತ್ತು ಸರ್ವಿಸ್ ಚಾರ್ಜ್ ವಿಧಿಸುತ್ತಿವೆ. ಆದರೆ ‘ಓನ್ಲಿ’ ಯಾವುದೇ ಕಮಿಷನ್ ಇಲ್ಲದ ಮಾಡೆಲ್ ಅಳವಡಿಸಿಕೊಂಡಿರುವುದು ಗ್ರಾಹಕರಿಗೆ ವರದಾನವಾಗಿದೆ. ಆದಾಗ್ಯೂ, ಈ ಮಾದರಿಯು ದೀರ್ಘಕಾಲದವರೆಗೆ ಲಾಭದಾಯಕವಾಗಿ ನಡೆಯಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಶ್ರೇಯಾ ಮತ್ತು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಆರಂಭಿಕ ಹಂತದಲ್ಲಿ ಗ್ರಾಹಕರನ್ನು ಸೆಳೆಯಲು ಇಷ್ಟು ಕಡಿಮೆ ದರ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಸ್ವಿಗ್ಗಿ ಮತ್ತು ಜೊಮಾಟೊ ಏಕಸ್ವಾಮ್ಯಕ್ಕೆ ಈ ಹೊಸ ಆ್ಯಪ್ ಬ್ರೇಕ್ ಹಾಕುತ್ತಾ ಅಥವಾ ಕಾಲಾನಂತರದಲ್ಲಿ ಇದು ಕೂಡ ದರ ಏರಿಕೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

