ಆಹಾರ ಮತ್ತು ಗ್ರಾಸರಿ ಡೆಲಿವರಿ ಮಾಡುವ ಪ್ರಮುಖ ಕಂಪನಿ ಸ್ವಿಗ್ಗಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. 15 ನಿಮಿಷದಲ್ಲಿ ಫುಡ್ ಡೆಲಿವರಿ ನೀಡಲು ಪ್ರಾರಂಭಿಸಲಾಗಿದ್ದ ಎಸ್‌ಎನ್‌ಎಸಿಸಿ (ಸ್ನ್ಯಾಕ್) ಸೇವೆಯನ್ನು ಸ್ಥಗಿತಗೊಳಿಸಿದೆ.
ಈ ಕುರಿತು ಮನಿಕಂಟ್ರೋಲ್ ವರದಿ ಮಾಡಿದ್ದು, ಕಂಪನಿಯ ಆಂತರಿಕ ಇಮೇಲ್ ಪ್ರಕಾರ, ಕೇವಲ ಒಂದು ವರ್ಷದ ಹಿಂದೆ ಪ್ರಾರಂಭಿಸಲಾಗಿದ್ದ 15 ನಿಮಿಷಗಳ ಆಹಾರ ವಿತರಣಾ ಸೇವೆಯಾದ ಸ್ನ್ಯಾಕ್ (Snacc) ಅಪ್ಲಿಕೇಶನ್ ಅನ್ನು ಮುಚ್ಚಲು ನಿರ್ಧರಿಸಲಾಗಿದೆ.
ಆರ್ಡರ್‌ಗಳಿಂದ ಲಾಭ ಗಳಿಸಲು ಕಂಪನಿಯು ಕಷ್ಟಪಡುತ್ತಿರುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದು ಮಾರುಕಟ್ಟೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿತ್ತು. ಆದರೆ ಅದರ ಒಟ್ಟಾರೆ ಲಾಭದಾಯಕತೆ ವ್ಯವಹಾರವನ್ನು ವಿಸ್ತರಿಸಲು ಸವಾಲಾಗಿ ಪರಿಣಮಿಸಿತ್ತು ಎಂದು ಹೇಳಿದೆ.
ದೀರ್ಘಕಾಲೀನ ಸಾಮರ್ಥ್ಯವನ್ನು ಹೊಂದಿರುವ ಹೊಸ ಆವಿಷ್ಕಾರಗಳ ಮೇಲೆ ನಾವು ನಮ್ಮೆಲ್ಲಾ ಶಕ್ತಿಯನ್ನು ಕೇಂದ್ರೀಕರಿಸಲು ಬಯಸುತ್ತೇವೆ. ಈ ಹಿನ್ನೆಲೆಯಲ್ಲಿ, ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ.
ಇ-ಮೇಲ್‌ನಲ್ಲಿ ಸ್ನ್ಯಾಕ್ ಎಷ್ಟು ಆರ್ಡರ್‌ಗಳನ್ನು ಪಡೆಯುತ್ತಿತ್ತು ಅಥವಾ ಎಷ್ಟು ಆದಾಯ ಗಳಿಸುತ್ತಿತ್ತು? ಎಂಬ ವಿವರಗಳನ್ನು ಹಾಕಿಲ್ಲ. ಆದರೆ ಹೋಲಿಕೆ ಮಾಡಿ ನೋಡಿದರೆ ಸ್ನ್ಯಾಕ್‌ಗೆ ಪೈಪೋಟಿ ನೀಡುವ ಮತ್ತು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಲಿಂಕಿಟ್‌ನ ಬಿಸ್ಟ್ರೋ 9 ತಿಂಗಳ ಅವಧಿಯಲ್ಲಿ ಸುಮಾರು 150 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ ಮತ್ತು ಮಾರಾಟದಲ್ಲಿ 20 ಕೋಟಿ ರೂಪಾಯಿಗಳಿಗಿಂತ ಕಡಿಮೆ ಆದಾಯ ಗಳಿಸಿದೆ.
ಇದು ಈ ಕ್ಷೇತ್ರದಲ್ಲಿನ ತೀವ್ರ ಪೈಪೋಟಿಯನ್ನು ತೋರಿಸುತ್ತದೆ. 10 ನಿಮಿಷಗಳಲ್ಲಿ ಆಹಾರ ವಿತರಣೆ ಮಾಡುವುದು ಒಂದು ಪ್ರಮುಖ ಟ್ರೆಂಡ್ ಆಗುತ್ತಿದ್ದ ಸಮಯದಲ್ಲಿ ಜನವರಿ 2025ರಲ್ಲಿ ಸ್ವಿಗ್ಗಿ ಸ್ನ್ಯಾಕ್ ಅನ್ನು ಪ್ರಾರಂಭಿಸಿತ್ತು.
ಇದೇ ಸಮಯದಲ್ಲಿ ಪ್ರತಿಸ್ಪರ್ಧಿಗಳಾದ ಬ್ಲಿಂಕಿಟ್ ಬಿಸ್ಟ್ರೋ ಎಂಬ ಪ್ರತ್ಯೇಕ ಅಪ್ಲಿಕೇಶನ್ ಪ್ರಾರಂಭಿಸಿದರೆ, ಜೆಪ್ಟೋ ತನ್ನ ಜೆಪ್ಟೋ ಕೆಫೆಗಾಗಿ ವಿಶೇಷ ಅಪ್ಲಿಕೇಶನ್ ಅನ್ನು ಹೊರತಂದಿತ್ತು.
ಇದಲ್ಲದೆ, ಅಕ್ಸೆಲ್ ನಿಧಿಯ ನೆರವು ಪಡೆದ ಸ್ವಿಶ್‌ನಂತಹ ಸಣ್ಣ ಕಂಪನಿಗಳು ಸಹ ಆ ಸಮಯದಲ್ಲಿ ಹೂಡಿಕೆದಾರರು ಮತ್ತು ಬಳಕೆದಾರರಲ್ಲಿ ಜನಪ್ರಿಯತೆ ಗಳಿಸಲು ಪ್ರಾರಂಭಿಸಿದ್ದವು.
ಉದ್ಯೋಗಿಗಳ ಕಥೆ ಏನು?; ಪ್ರಾಯೋಗಿಕವಾಗಿ ಪ್ರಾರಂಭವಾದ ಸ್ನ್ಯಾಕ್ ಬೆಂಗಳೂರು ಮತ್ತು ಗುರುಗ್ರಾಮದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು ಮತ್ತು ಕಳೆದ 12 ತಿಂಗಳುಗಳಲ್ಲಿ ಹೆಚ್ಚಿನ ವಿಸ್ತರಣೆಯನ್ನು ಮಾಡಿರಲಿಲ್ಲ. ಇದರಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಉದ್ಯೋಗಿಗಳಿಗೆ ಸ್ವಿಗ್ಗಿ 48 ಗಂಟೆಗಳ ಕಾಲಾವಕಾಶ ನೀಡಿದೆ.
ನಮ್ಮ ವಿವಿಧ ವ್ಯವಹಾರ ವಿಭಾಗಗಳಲ್ಲಿ ಈ ಜನರನ್ನು ಸೇರಿಸಿಕೊಳ್ಳುತ್ತಿದ್ದೇವೆ ಮತ್ತು ಅವರಿಗೆ ಈ ಬದಲಾವಣೆಯ ಹಂತದಲ್ಲಿ ಅಗತ್ಯ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಇ-ಮೇಲ್ ತಿಳಿಸಿದೆ.

