HomeKarnatakaಇಂದು `ಸುವರ್ಣ ಕರ್ನಾಟಕ ರಾಜ್ಯೋತ್ಸವ' : ವಿಜೃಂಭಣೆ ಆಚರಣೆಗೆ ಸಕಲ ಸಿದ್ಧತೆ

ಇಂದು `ಸುವರ್ಣ ಕರ್ನಾಟಕ ರಾಜ್ಯೋತ್ಸವ’ : ವಿಜೃಂಭಣೆ ಆಚರಣೆಗೆ ಸಕಲ ಸಿದ್ಧತೆ

ಬೆಂಗಳೂರು : ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ನವೆಂಬರ್ 01 ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ.  ಹೀಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 01 ರಂದು ಹೆಚ್ಚು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸರ್ಕಾರದ  ವತಿಯಿಂದ ಸಕಲ ಸಿದ್ಧತೆಗಳು ನಡೆದಿದೆ.

 ಕರ್ನಾಟಕ 50 ವರ್ಷಗಳ ಸಂಭ್ರಮ ಆಚರಿಸುತ್ತಿರುವುದರಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿಶೇಷ ಮೆರುಗು ಬಂದಿದೆ. ರಾಜ್ಯಾದ್ಯಂತ ರಾಜ್ಯೋತ್ಸವ ಸಮಾರಂಭ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.  ಕನ್ನಡ ರಾಜ್ಯೋತ್ಸವ ಅಂಗವಾಗಿ ಅಂದು ಬೆಳಿಗ್ಗೆ 7.30 ಕ್ಕೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯು ಪ್ರಾರಂಭವಾಗಲಿದೆ. ಮೆರವಣಿಗೆಯಲ್ಲಿ ನಮ್ಮ ನಾಡು, ನುಡಿ, ಸಂಸ್ಕøತಿ ಬಿಂಬಿಸುವ ವಿವಿಧ ವೈವಿಧ್ಯಮಯ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು, ಅಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಭದ್ರಾ ಮೇಲ್ದಂಡೆ ಯೋಜನೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ಸ್ತಬ್ಧಚಿತ್ರಗಳು, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರದ ಯೋಜನೆಗಳನ್ನು ಸ್ತಬ್ಧಚಿತ್ರಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲಾಗುವುದು.

ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನ ಅಂಗವಾಗಿ ಸರ್ಕಾರ ಆಯ್ಕೆಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಹಾಡುಗಳನ್ನು ಜಿಲ್ಲಾ, ತಾಲೂಕು ಹಾಗೂ ಗ್ರಾಮ‌ ಪಂಚಾಯತಿ ಮಟ್ಟದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ಗೀತ ಗಾಯನದ ನಮನ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ.

ಕರ್ನಾಟಕ-50 ಸಂಭ್ರಮ ಹಿನ್ನೆಲೆಯಲ್ಲಿ 2023 ನವೆಂಬರ್ 1 ರಿಂದ 2024ರ‌ ನವೆಂಬರ್ 1ರ ವರೆಗೆ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ‌ ಭಾಗವಾಗಿ ನವೆಂಬರ್ 1 ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ರಾಷ್ಟ್ರ ಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ 5 ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸಬೇಕೆಂದು ಸರ್ಕಾರ ಆದೇಶಿಸಿದೆ.

ಎಲ್ಲಾ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳು, ಸರ್ಕಾರಿ, ಅರೆ-ಸರ್ಕಾರಿ, ನಿಗಮ ಮಂಡಳಿಗಳ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಸಂಘ ಸಂಸ್ಥೆಗಳು ನವೆಂಬರ್ 1 ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿ ನಮನ (ಗೀತ ಗಾಯನ) ಸಲ್ಲಿಸಬೇಕೆಂದು ತಿಳಿಸಲಾಗಿದೆ.

ಗೀತ ಗಾಯನದ 5 ಕನ್ನಡ ಗೀತೆಗಳು:

ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ‌ ನಮ್ಮ ಚೆಲುವ ಕನ್ನಡ ನಾಡು”, ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು”, ದ.ರಾ.ಬೇಂದ್ರೆ ಅವರ “ಒಂದೇ ಒಂದೇ ಕರ್ನಾಟಕವೊಂದೇ”, ಸಿದ್ದಯ್ಯ ಪುರಾಣಿಕ ಅವರ “ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ” ಹಾಗೂ ಚನ್ನವೀರ ಕಣವಿ ಅವರ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ”.

For Latest News Updates, Join Our Whatsapp Community🚩
RELATED ARTICLES

Most Popular