ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವುದನ್ನು ಶ್ರೀಮಂತರ ಸ್ವಯಂ ಪ್ರೇರಿತವಾಗಿ ಬಿಡಬೇಕು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಕರೆ ನೀಡಿದ್ದಾರೆ.
ಭಾನುವಾರ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರ ಬಡವರ ಶ್ರೇಯೋಭಿವೃದ್ಧಿಗೆ ತಂದ ಯೋಜನೆಗಳಾಗಿವೆ. ಗ್ಯಾರಂಟಿ ಬಡವರ ಆಧಾರಸ್ತಂಭ. ಅಭಿವೃದ್ಧಿಯ ಒಂದು ಭಾಗ. ಇವು ಬಡವರಿಗಾಗಿ ಇರುವ ಯೋಜನೆಗಳಾಗಿದ್ದು, ಇವುಗಳ ಪ್ರಯೋಜನ ಪಡೆಯುವುದನ್ನು ಶ್ರೀಮಂತರು ಸ್ವಯಂ ಪ್ರೇರಿತವಾಗಿ ಬಿಡಬೇಕು ಎಂದು ಕರೆ ನೀಡಿದ್ದಾರೆ.

