ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಎಲ್ಲಾ ಎಫ್ಐಆರ್ ಗಳನ್ನು ಸುಪ್ರೀಂ ಕೋರ್ಟ್ ರದ್ದುಗಿಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಇತ್ತೀಚೆಗೆ ಪರೀಕ್ಷಾ ಅಕ್ರಮ ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದೆಹಲಿ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ.ಮೋಹನಾ ಅವರಿದ್ದ ಪೀಠವು ಸಂವಿಧಾನದ 142ನೇ ವಿಧಿಯನ್ವಯ ಇರುವ ಪರಮಾಧಿಕಾರವನ್ನು ಬಳಸಿ ಈ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಿದೆ.
ದೆಹಲಿ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಹೊರತುಪಡಿಸಿ, ಇತರ ಯಾವುದೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿರುವ ಇಂತಹ ಎಫ್‌ಐಆರ್‌ಗಳ ತನಿಖೆಯನ್ನು ಮುಂದುವರಿಸಬಾರದು ಹಾಗೂ ಅವುಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ.

