ಮಂಗಳೂರು: ಮಂಗಳೂರು ನಗರದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ 19 ಮಂದಿ ಬಾಂಗ್ಲಾದೇಶ ಮೂಲದ ಕಾರ್ಮಿಕರು ಪತ್ತೆಯಾಗಿದ್ದು, ಇವರನ್ನು ಕಟ್ಟಡ ಕೆಲಸಕ್ಕೆ ಪೂರೈಕೆ ಮಾಡುತ್ತಿದ್ದ ಮೂವರು ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ 19 ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಉರ್ವ ಠಾಣೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿ ಪಶ್ಚಿಮ ಬಂಗಾಳದ ಮೂವರು ಏಜೆಂಟರನ್ನು ಬಂಧಿಸಿದ್ದಾರೆ.
ಮುರ್ಷಿದಾಬಾದ್ ನ ಮೊಯ್ದಲ್ ಇಸ್ಲಾಂ(35), ದಿಲಾವರ್ ಹೊಸೈನ್(29) ಹಾಗೂ ರಸೂಲ್ ಇಸ್ಲಾಂ ಬಂಧಿತರು. ಇವರು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಮಂಗಳೂರಿಗೆ ಕರೆತರುತ್ತಿದ್ದರು. ಅವರೊಂದಿಗೆ ಬಾಂಗ್ಲಾದೇಶದ ಪ್ರಜೆಗಳನ್ನು ಕೂಡ ಕರೆತಂದಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮೊಯ್ದಲ್ ಇಸ್ಲಾಂ ಮತ್ತು ದಿಲಾವರ್ ಹೊಸೈನ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯನ್ನು ರಸೂಲ್ ಇಸ್ಲಾಂನನ್ನು ಡಿಸಿಪಿ ಮಿಥುನ್ ಅವರ ತಂಡ ಕೊಲ್ಕತ್ತಾಕ್ಕೆ ತೆರಳಿ ಅಲ್ಲಿನ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಬಂಧಿಸಿದೆ. ಆರೋಪಿಯನ್ನು ಕರೆ ತಂದ ನಂತರ ಈ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಜುಲೈ 10 ರಂದು ಸುರತ್ಕಲ್ ನ ಮುಕ್ಕ ಸಮೀಪ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾಗಿದ್ದರು. ಜುಲೈ 11ರಂದು ಉರ್ವ ಠಾಣೆ ಪೊಲೀಸರು 11 ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಿದ್ದರು. ಬಂಧಿತರ ಬಳಿ ನಕಲಿ ದಾಖಲೆಗಳು ಪತ್ತೆಯಾಗಿದ್ದವು.

