ಮೆಗಾಸ್ಟಾರ್ ಚಿರಂಜೀವಿ ಅವರು ಮೊದಲಿನಿಂದಲೂ ಆಂಜನೇಯ ಸ್ವಾಮಿಯ ಪರಮ ಭಕ್ತರು. ಇಂದು (ಏಪ್ರಿಲ್ 2, 2026) ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ, ಚಿರಂಜೀವಿ ಅವರು ತಮ್ಮ ಮನೆಯ ಪೂಜಾ ಮಂದಿರದಲ್ಲಿ ನಡೆದ ಒಂದು ಅದ್ಭುತ ಸನ್ನಿವೇಶದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿರಂಜೀವಿ ಅವರ ಮನೆಯ ಪೂಜಾ ಮಂದಿರದಲ್ಲಿರುವ ಹನುಮಂತನ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದಿವೆ. ಈ ದೃಶ್ಯವು ಅಯೋಧ್ಯೆಯ ಬಾಲರಾಮನ ಹಣೆಯ ಮೇಲೆ ಸೂರ್ಯ ಕಿರಣಗಳು ಬಿದ್ದ ‘ಸೂರ್ಯ ತಿಲಕ’ದ ವೈಭವವನ್ನು ನೆನಪಿಸುವಂತಿದೆ.”ಪ್ರತಿ ವರ್ಷ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಸೂರ್ಯನ ಕಿರಣಗಳು ಸಪ್ತ ವರ್ಣಗಳಾಗಿ ಬದಲಾಗಿ ನಮ್ಮ ಪೂಜಾ ಮಂದಿರದಲ್ಲಿರುವ ಹನುಮಂತನನ್ನು ಸ್ಪರ್ಶಿಸುತ್ತವೆ. ಈ ಅನುಭೂತಿಯನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ” ಎಂದು ಮೆಗಾಸ್ಟಾರ್ ಹೇಳಿದ್ದಾರೆ.
ದೈವಿಕ ಅನುಭವ : ಕೋಣಾರ್ಕ್ ಮತ್ತು ಅರಸವಲ್ಲಿ ದೇವಾಲಯಗಳಲ್ಲಿ ಸೂರ್ಯನ ಕಿರಣಗಳು ದೇವರನ್ನು ಸ್ಪರ್ಶಿಸುವ ವಿಶೇಷತೆ ನಮಗೆಲ್ಲರಿಗೂ ತಿಳಿದಿದೆ. ಅಂತಹದ್ದೇ ದೈವಿಕ ಅನುಭವ ನನ್ನ ಮನೆಯಲ್ಲೂ ಆಗುತ್ತಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.
ಹನುಮಂತನ ಮೇಲೆ ಭಕ್ತಿ : ಚಿರಂಜೀವಿ ಅವರ ತಾಯಿಯ ಹೆಸರು ಅಂಜನಾ ದೇವಿ. ಅವರು ತಮ್ಮ ಮನೆಗೆ ‘ಅಂಜನಾದ್ರಿ’ ಎಂದು ಹೆಸರಿಟ್ಟಿರುವುದು ಹನುಮಂತನ ಮೇಲಿರುವ ಅವರ ಭಕ್ತಿಗೆ ಸಾಕ್ಷಿಯಾಗಿದೆ.
ಮೆಗಾಸ್ಟಾರ್ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಇದನ್ನು ‘ಅದ್ಭುತ’ ಎಂದು ಬಣ್ಣಿಸುತ್ತಿದ್ದಾರೆ. ಈ ಮೂಲಕ ಅವರು ತಮ್ಮೆಲ್ಲಾ ಅಭಿಮಾನಿಗಳಿಗೆ ಹನುಮಾನ್ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ.

