ಬೆಂಗಳೂರು: ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿರುವ ಮತ್ತು ಅದಕ್ಕೆ ಕುಮ್ಮಕ್ಕು ಕೊಡುವ ಪೋಷಕರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾವ ಕಾಯ್ದೆ ಕಾನೂನುಗಳು ಜಾರಿಯಲ್ಲಿವೆಯೋ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಆರೋಪಿ ಹಬೀಬ್ ಸಲ್ಲಿಸಿದ್ದ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಕಾನೂನಿಗೆ ವಿರುದ್ಧವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ಪೋಷಕರ ನಡೆ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ಮತ್ತು ಆರೋಪಿ ಈಗಾಗಲೇ ಮದುವೆಯಾಗಿದ್ದಾರೆ. ಮದುವೆಯಾದಾಗ ಸಂತ್ರಸ್ತೆಯ ವಯಸ್ಸು 17 ವರ್ಷ 10 ತಿಂಗಳು ಆಗಿತ್ತು. ದೂರುದಾರಳಾದ ಪತ್ನಿ ಈಗ ಗರ್ಭಿಣಿಯಾಗಿದ್ದಾಳೆ. ಅಂತಿಮವಾಗಿ ಪರಸ್ಪರ ಒಪ್ಪಂದದ ಮೂಲಕ ಪ್ರಕರಣ ಇತ್ಯರ್ಥಗೊಳಿಸಲು ಆಕೆ ಇಚ್ಛಿಸಿದ್ದಾಳೆ. ಯುವಕನನ್ನು ಪೋಕ್ಸೊ ಕೇಸ್ ನಿಂದ ಮುಕ್ತಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ್, ಪ್ರಕರಣದಲ್ಲಿ ಸೆಟಲ್ಮೆಂಟ್ ಮಾಡಿಕೊಳ್ಳುತ್ತೇವೆ ಎಂಬ ಅರ್ಜಿದಾರದ ವಾದ ಒಪ್ಪುವಂತಹದ್ದಲ್ಲ. ಈ ಪ್ರಕರಣದಲ್ಲಿ ಪೋಷಕರೇ ಮುಂದಾಗಿ ಮದುವೆ ಮಾಡಿಸಿದ್ದು, ಅವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕಠಿಣ ಕ್ರಮಕ್ಕೆ ಆದೇಶಿಸಬೇಕೆಂದು ಕೋರಿದ್ದಾರೆ. ಇದಕ್ಕೆ ನ್ಯಾಯ ಪೀಠ ಇಂತಹ ಪ್ರಕರಣದಲ್ಲಿ ಸಲುಗೆ ತೋರಿಸುವುದು ಸರಿಯಲ್ಲ, ಈ ರೀತಿ ಅಪ್ರಾಪ್ತ ಮಕ್ಕಳ ಮದುವೆ ಮಾಡಿಸಿದರೆ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಬೆಲೆ ಬರುತ್ತದೆಯೇ ಎಂದು ಪ್ರಶ್ನಿಸಿದೆ. ಈ ಕುರಿತು ವಿಸ್ತೃತ ತೀರ್ಪು ಪ್ರಕಟಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದೆ.

