ಬೆಂಗಳೂರು ಮಹಾನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದೆ. ಮುಖ್ಯ ರಸ್ತೆ, ಉಪ ಮುಖ್ಯ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಬಿಎ ಪಾಲಿಕೆಗಳ ಬಜೆಟ್ ಸಿದ್ಧತೆ ಮತ್ತು ಕಾರ್ಯಕಾರಿ ಸಭೆ ನಡೆಸಿದ ಡಿಸಿಎಂ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ನಾಗರೀಕರು ಸಾಗಲು ತೊಂದರೆಯಾಗಿದೆ. ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದು, ಅವರಿಗೆ ಪ್ರತ್ಯೇಕ ಜಾಗ ಕಲ್ಪಿಸಿ ಜನರಿಗೆ ಪಾದಚಾರಿ ಮಾರ್ಗದಲ್ಲಿ ಓಡಾಡಲು ಅವಕಾಶ ಮಾಡಿಕೊಡುವ ಬಗ್ಗೆ ತೀರ್ಮಾನಿಸಲಾಗಿದೆ. ಬೀದಿ ವ್ಯಾಪಾರಿಗಳ ವ್ಯಾಪಾರಕ್ಕೆ ನಿರ್ದಿಷ್ಟ ರಸ್ತೆಗಳನ್ನು ನಿಗದಿ ಮಾಡಬೇಕು. ಇದಕ್ಕೆ ಎಲ್ಲಾ ಶಾಸಕರು ಒಮ್ಮತದ ಅಭಿಪ್ರಾಯ ತಿಳಿಸಿದ್ದಾರೆ.
ಹಗಲು ವೇಳೆ ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಯನ್ನು ಬೀದಿ ಬದಿಯಲ್ಲಿ ಕಟ್ಟಿ ಹೋಗಿದ್ದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. 60 ಸಾವಿರ ಬೀದಿ ಬದಿ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ. 30 ಸಾವಿರ ಮಂದಿ ವಾಹನ ಕೇಳಿದ್ದಾರೆ. ಅದಕ್ಕೆ ಟೆಂಡರ್ ಕರೆಯಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಇದ್ದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ

