ಬೆಂಗಳೂರು: ಡಿಜಿಟಲ್ ಜಗತ್ತಿನಲ್ಲಿ ನಾವೆಷ್ಟು ಅಪ್‌ಡೇಟ್ ಆಗುತ್ತಿದ್ದೇವೋ, ವಂಚಕರು ಕೂಡ ಅಷ್ಟೇ ಹೈಟೆಕ್ ಆಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದ್ದು, ಸಣ್ಣ ಅಜಾಗರೂಕತೆಯೂ ನಿಮ್ಮನ್ನು ಬೀದಿಗೆ ತರಬಹುದು
ವಂಚಕರು ನಿಮ್ಮನ್ನು ಹೇಗೆ ಬಲೆಗೆ ಬೀಳಿಸುತ್ತಾರೆ?
ಫಿಶಿಂಗ್ (Phishing): ಬ್ಯಾಂಕ್ ಹೆಸರಲ್ಲಿ ಬರುವ ನಕಲಿ ಲಿಂಕ್ ಕ್ಲಿಕ್ ಮಾಡಿದರೆ ಮುಗಿದೇ ಹೋಯ್ತು, ನಿಮ್ಮ ರಹಸ್ಯ ಮಾಹಿತಿ ಹ್ಯಾಕರ್ಸ್ ಕೈ ಸೇರುತ್ತದೆ.
ಸ್ಕಿಮ್ಮಿಂಗ್ (Skimming): ಎಟಿಎಂ ಅಥವಾ ಮಾಲ್‌ಗಳಲ್ಲಿ ಕಾರ್ಡ್ ಸ್ವೈಪ್ ಮಾಡುವಾಗ ಹುಷಾರ್! ಅಲ್ಲಿ ಅಳವಡಿಸಿರುವ ಪುಟ್ಟ ಸಾಧನ ನಿಮ್ಮ ಕಾರ್ಡ್ ಡೇಟಾ ಕದಿಯಬಲ್ಲದು.
ಸಿಮ್ ಸ್ವಾಪಿಂಗ್ (SIM Swapping): ನಿಮ್ಮ ಮೊಬೈಲ್ ಸಿಮ್ ಅನ್ನೇ ವಂಚಕರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ನಿಮ್ಮ ಒಟಿಪಿ (OTP) ಕದಿಯುತ್ತಾರೆ.
ನಕಲಿ ಆಫರ್ಸ್: ಆನ್‌ಲೈನ್‌ನಲ್ಲಿ ಭರ್ಜರಿ ಆಫರ್ ನೀಡಿ ನಿಮ್ಮನ್ನು ನಕಲಿ ವೆಬ್‌ಸೈಟ್‌ಗಳಿಗೆ ಸೆಳೆದು ವಂಚಿಸಲಾಗುತ್ತದೆ.
ನಿಮಗೆ ವಂಚನೆಯ ಮುನ್ಸೂಚನೆ ಸಿಗುವುದು ಹೀಗೆ:
ನೀವು ಮಾಡದ ವಹಿವಾಟಿಗೆ ಒಟಿಪಿ ಬರುವುದು.
ಮಾಸಿಕ ಬಿಲ್‌ನಲ್ಲಿ ಸಣ್ಣ ಮೊತ್ತದ ಅನಾಮಧೇಯ ಖರ್ಚುಗಳು ಕಾಣಿಸಿಕೊಳ್ಳುವುದು.
ಬ್ಯಾಂಕ್ ಸ್ಟೇಟ್‌ಮೆಂಟ್ ಇಮೇಲ್ ಬರುವುದು ಇದ್ದಕ್ಕಿದ್ದಂತೆ ನಿಂತು ಹೋಗುವುದು.
ಸೇಫ್ ಆಗಿರಲು ತಜ್ಞರ 5 ಸೂತ್ರಗಳು:
ಲಿಂಕ್ ಕ್ಲಿಕ್ ಮಾಡಬೇಡಿ: ಕೆವೈಸಿ (KYC) ಅಪ್‌ಡೇಟ್ ಅಥವಾ ಲಾಟರಿ ಹೆಸರಲ್ಲಿ ಬರುವ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಬೇಡಿ. ಬ್ಯಾಂಕ್‌ಗಳು ಎಂದಿಗೂ ಪಿನ್ ಕೇಳುವುದಿಲ್ಲ.
ಲಿಮಿಟ್ ಸೆಟ್ ಮಾಡಿ: ಬ್ಯಾಂಕಿಂಗ್ ಆಪ್ ಮೂಲಕ ನಿಮ್ಮ ದೈನಂದಿನ ಖರ್ಚಿನ ಮಿತಿಯನ್ನು ನಿಗದಿಪಡಿಸಿ.
ಇಂಟರ್ನ್ಯಾಷನಲ್ ಪೇಮೆಂಟ್ ಆಫ್ ಮಾಡಿ: ಅಗತ್ಯವಿಲ್ಲದಿದ್ದಾಗ ಅಂತರಾಷ್ಟ್ರೀಯ ವಹಿವಾಟುಗಳನ್ನು ‘ಡಿಸೇಬಲ್’ ಮಾಡಿಡಿ.
2FA ಬಳಸಿ: ಬಯೋಮೆಟ್ರಿಕ್ ಅಥವಾ ಹೆಚ್ಚುವರಿ ಪಾಸ್‌ವರ್ಡ್ ಭದ್ರತೆ ಸಕ್ರಿಯಗೊಳಿಸಿ.
ಸ್ಟೇಟ್‌ಮೆಂಟ್ ಚೆಕ್ ಮಾಡಿ: ನಿಯಮಿತವಾಗಿ ನಿಮ್ಮ ಖರ್ಚು ವೆಚ್ಚಗಳನ್ನು ಪರಿಶೀಲಿಸಿ.
ಒಂದು ವೇಳೆ ನೀವು ಹಣ ಕಳೆದುಕೊಂಡರೆ ತಕ್ಷಣ ಬ್ಯಾಂಕ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಿ. ನಂತರ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ. ನೆನಪಿರಲಿ, ವಂಚನೆ ನಡೆದ 3 ದಿನಗಳ ಒಳಗೆ ದೂರು ನೀಡಿದರೆ ನಿಮ್ಮ ಹಣ ಮರಳಿ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

