ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾದ ದೈವದ ಪಾತ್ರವನ್ನು ಅನುಕರಿಸಲು ಹೋಗಿ ದೈವಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿಉಡ್ ನಟ ರಣವೀರ್ ಸಿಂಗ್ ವಿರುದ್ಧ ದಾಖಲಾಗಿದ್ದ ಕೇಸ್ ಹೈಕೋರ್ಟ್ ನಲ್ಲಿ ಇತ್ಯರ್ಥವಾಗಿದೆ.
ಕಾಂತಾರಾ ಚಾಪ್ಟರ್-1ರ ಚಾಮುಂಡಿ ದೈವದ ಪಾತ್ರಕ್ಕೆ ಅವಮಾನ ಮಾಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ತಪ್ಪಿಗಾಗಿ ಕ್ಷಮೆಯಾಚಿಸಿದ್ದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ಕ್ಷಮೆಯಾಚಿಸುವುದಾಗಿಯೂ ಹೇಳಿದ್ದರು.
ಅರ್ಜಿ ವಿಚಾರಣೆ ವೇಳೆ ರಣವೀರ್ ಸಿಂಗ್ ಕ್ಷಮಾಪಣೆ ಪತ್ರವನ್ನು ಕೋರ್ಟ್ ಗೆ ಸಲ್ಲಿಸಿದ್ದು, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲು ಸಿದ್ಧರಿರುವುದಾಗಿ ಆದರೆ ಭದ್ರತೆ ದೃಷ್ಟಿಯಿಂದ ಭೇಟಿಗೆ ಗಡುವು ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ರಣವೀರ್ ಸಿಂಗ್ ಪರ ವಕೀಲ ಸಜನ್ ಪೂವಯ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ರಣವೀರ್ ಸಿಂಗ್ ಕ್ಷಮೆಯಾಚನೆ ಅಂಗೀಕರಿಸಿದ ಹೈಕೋರ್ಟ್, ಅರ್ಜಿಯನ್ನು ಇತ್ಯರ್ಥಗೊಳಿಸಿದೆ. ಅಲ್ಲದೇ ಚಾಮುಂಡಿ ಬೆಟ್ಟ ಭೇಟಿ ಬಗ್ಗೆ ಆದೇಶ ನೀಡಲಾಗುವುದು ಎಂದು ತಿಳಿಸಿದೆ.
ಈ ವೇಳೆ ರಣವೀರ್ ಸಿಂಗ್ ಪರ ವಕೀಲರು, ಭದ್ರತಾ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲು ಸಮಯಾವಕಾಶ ನೀಡಬೇಕು ಎಂದು ಕೇಳಿದ್ದಾರೆ. ಆದರೆ ಕರ್ನಾಟಕ ಪೊಲೀಸರು ಸೂಕ್ತ ಭದ್ರತೆ ಒಡಗಿಸಲು ಸಮರ್ಥರಿದ್ದಾರೆ. ಹಾಗಾಗಿ ಶೀಘ್ರದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ರಣವೀರ್ ಸಿಂಗ್ ಪರ ಮತ್ತೋರ್ವ ವಕೀಲ ಪ್ರಶಾಂತ್ ಮಿತ್ತಲ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದಾರೆ.

