ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ ಪ್ರಕರಣ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ.
ಈ ಘಟನೆ ಬಳಿಕ ಪೊಲೀಸರು ನಡೆಸಿದ ಶಾಂತಿ ಸಭೆಗೆ ಹಿಂದೂ ಸಂಘಟನೆಗಳ ಸದಸ್ಯರು ಗೈರಾಗಿದ್ದರು. ಆದರೆ ಬಾಗಲಕೋಟೆ ಹಿಂದೂ ಸಮಾಜದ ನಿರ್ಣಾಯಕ ಸಭೆ ಭಾನುವಾರ ನಡೆದಿದ್ದು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಬಾಗಲಕೋಟೆ ಗಲಭೆ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದ್ದರು.
‘ಈಗಾಗಲೇ ಪ್ರಕರಣದ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ. ನಾಡಿನ ಜನರಿಗೆ ಭಯಮುಕ್ತ ನೆಮ್ಮದಿಯ ಬದುಕು ನೀಡುವುದು ನಮ್ಮ ಮೊದಲ ಆದ್ಯತೆ’ ಎಂದು ತಿಳಿಸಿದ್ದರು.
‘ಜನರ ಶಾಂತಿ – ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ – ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೂ ಕಿವಿಗೊಡದೆ, ಸಂಯಮದಿಂದ ವರ್ತಿಸಿ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡಲಿದೆ’ ಎಂದು ಭರವಸೆ ಕೊಟ್ಟಿದ್ದರು.
ಹಿಂದೂ ಸಂಘಟನೆಗಳ ಪ್ರಮುಖ ನಿರ್ಣಯಗಳು
* ಮೊದಲು ಬೃಹತ್ ಪ್ರತಿಭಟನೆ, ನಂತರ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ.
* 26-02-2026 ರಂದು ಬಾಗಲಕೋಟೆ ಚಲೋ (ಜಿಲ್ಲೆಯ ಎಲ್ಲ ಹಿಂದೂಗಳಿಂದ ಬೃಹತ್ ಪ್ರತಿಭಟನಾ ಜಾಥಾ).
* ಛತ್ರಪತಿ ಶಿವಾಜಿ ಮಹರಾಜರ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ಎಸೆದ ಮಾರ್ಗದಲ್ಲಿಯೇ ಪ್ರತಿಭಟನಾ ಮೆರವಣಿಗೆ.
* ಮಸೀದಿಯ ಮೌಲ್ವಿ ಅಥವಾ ಅಧ್ಯಕ್ಷನ ಮೇಲೆ FIR & ಬಂಧನ ಆಗುವವರೆಗೂ ಹೋರಾಟ.
* ಕಮೀಟಿಯ ಎಲ್ಲಾ ಸದಸ್ಯರ ಬಂಧನ.
* ಹಿಂದೂ ಕಾರ್ಯಕರ್ತರನ್ನು ಇನ್ನುಮುಂದೆ ಬಂಧಿಸಲು ಮುಂದಾದರೆ ಹುಷಾರ್. (ಪೊಲೀಸ್ ಇಲಾಖೆಗೆ ಇದೊಂದು ಎಚ್ಚರಿಕೆ) ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ.
* ನಿಷೇದಾಜ್ಞೆಯನ್ನು ತಕ್ಷಣದಿಂದ ಹಿಂಪಡೆಯಬೇಕು. ಜನಸಾಮಾನ್ಯರ ಸಂಚಾರ ಸುಗಮಗೊಳಿಸಬೇಕು.
* ಇನ್ನುಮುಂದೆ ಪಂಕಾ ಮಸೀದಿ ಸ್ಥಳದಲ್ಲಿ ಏನೇ ದುರ್ಘಟನೆಗಳು ನಡೆದರೆ ತಕ್ಷಣವೇ ಉತ್ತರ ನೀಡಲಾಗುತ್ತದೆ.
* ಹಿಂದೂ ಸಮಾಜ ಒಟ್ಟಾಗಿ ಈ ಅವಮಾನವನ್ನು ತೊಳೆಯುವುದು.
* ಮಸೀದಿಯಲ್ಲಿ ಸೇರಿದ್ದ ಎಲ್ಲಾ ಮತಾಂಧರ ಬಂಧನ ಆಗಲೇಬೇಕು.

