ಬೆಂಗಳೂರು: ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಾರಿಗೆ ಬಸ್ ಗಳ ಟಿಕೆಟ್ ದರ ಹೆಚ್ಚಳ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಟಿಕೆಟ್ ದರ ಪರಿಷ್ಕರಣೆಗಾಗಿ ಪ್ರತ್ಯೇಕ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಸಮಿತಿ ಸಾರಿಗೆ ಸಂಸ್ಥೆಗಳ ಕಾಲಕಾಲದ ಖರ್ಚು ವೆಚ್ಚ ಮತ್ತು ಡೀಸೆಲ್ ಬೆಲೆ ಏರಿಕೆಯಂತಹ ಮಾನದಂಡ ಆಧರಿಸಿ ದರ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಟಿಕೆಟ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ದೀರ್ಘಕಾಲದ ಬಳಿಕ ಒಮ್ಮೆಲೆ ದೊಡ್ಡ ಪ್ರಮಾಣದಲ್ಲಿ ದರ ಏರಿಕೆ ಮಾಡುವ ಬದಲು ಆಗಾಗ ಅಲ್ಪ ಪ್ರಮಾಣದಲ್ಲಿ ಟಿಕೆಟ್ ದರ ಏರಿಕೆ ಮಾಡಿದಲ್ಲಿ ಜನರಿಗೂ ಹೊರೆಯಾಗುವುದಿಲ್ಲ. ಸಾರಿಗೆ ಸಂಸ್ಥೆಗಳಿಗೂ ನಷ್ಟವಾಗುವುದಿಲ್ಲ ಎಂದು ತಿಳಿಸಿದ್ದಾರೆ.

