ಮಂಡ್ಯ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರನ್ನು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ಸ್ಟಿಂಗ್ ಆಪರೇಷನ್ ಮೂಲಕ ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಅಲ್ಲದೇ ಕ್ಯಾಬಿನೆಟ್ ಸಭೆಯಲ್ಲಿ ಸಚಿವರುಗಳಿಗೆ ಎಚ್ಚರದಿಂದ ಇರುವಂತೆ ವಾರ್ನಿಂಗ್ ಕೊಟ್ಟಿದ್ದರು. ಆದರೆ ಈ ಬಗ್ಗೆ ವ್ಯಂಗ್ಯವಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ದೂರು ನೀಡಿ ತನಿಖೆ ನಡೆಸಲಿ. ಟ್ರ್ಯಾಪ್ ಮಾಡಲು ಬಂದವರನ್ನು ಹಿಡಿಯದೇ ಬಿಟ್ಟಿದ್ಯಾಕೆ? ಎಂದೆಲ್ಲ ಪ್ರಶ್ನಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರವಿ ಗಣಿಗ ಹೆಚ್.ಡಿ.ಕುಮಾರಸ್ವಾಮಿ ರೀತಿಯಲ್ಲಿಯೇ ಜೇಬ್ ನಿಂದ ಪೆನ್ ಡ್ರೈವ್ ತೆಗೆದು ಪ್ರದರ್ಶಿಸಿ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ರವಿ ಗಣಿಗ, ಪಕ್ಕಾ ಕುಮಾರಸ್ವಾಮಿ ಶೈಲಿಯಲ್ಲಿಯೇ ಪೆನ್ ಡ್ರೈವ್ ಪ್ರದರ್ಶಿಸಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಇನ್ನೊಂದು ವಾರದಲ್ಲಿ ಸ್ಟಿಂಗ್ ಆಪರೇಷನ್ ಕುತಂತ್ರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಸಿಎಂ ಆದಮೇಲೆ ಅಭಿವೃದ್ಧಿ ಶರವೇಗ ಪಡೆದುಕೊಂಡಿದೆ. ಇದನ್ನು ಸಹಿಸದೆ ವಿಪಕ್ಷಗಳ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ ಎಂದರು.
ಸ್ಟಿಂಗ್ ಆಪರೇಷನ್ ಮಾಡಲು ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ನೀಡಲಾಗಿದೆ. ಅವರಿಗೆ ಬೆಂಗಳೂರಿನ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಸಚಿವರೊಬ್ಬರು, ರಾಜ್ಯದ ಬಿಜೆಪಿ ನಾಯಕರೊಬ್ಬರು ಸೇರಿ ಸ್ಟಿಂಗ್ ಆಪರೇಷನ್ ನಡೆಸಲು ಸುಪಾರಿ ಕೊಟ್ಟಿದ್ದಾರೆ. ಎರಡು ಏಜ್ಸಿಗಳಿಂದ 10 ಸಚಿವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ತಿಳಿಸಿದರು.
ದೆಹಲಿ ಮೂಲದ ಒಂದು ಏಜೆನ್ಸಿ, ಕೋಲ್ಕತ್ತಾ ಮೂಲದ ಇನ್ನೊಂದು ಏಜೆನ್ಸಿ ಒಟ್ಟು ಎರಡು ಏಜೆನ್ಸಿಗಳ ಮೂಲಕ ಕಾರ್ಯಾಚರಣೆ ಮಾಡಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಈ ಏಜೆನ್ಸಿಯವರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಸಿಎಂ, ಸಚಿವರ ಚಲನವಲನ ಪ್ರತಿಯೊಂಡನ್ನೂ ಗಮನಿಸುತ್ತಿದ್ದಾರೆ ಎಂದರು.
ಸಚಿವರನ್ನು ಸ್ಟಿಂಗ್ ಮಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ಲಾನ್ ಅವರದ್ದಾಗಿದೆ. ಆದರೆ ನಮ್ಮ ಸಚಿವರು ಶುದ್ಧ ಹಸ್ತರಿದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್ ಮಾಡಿಸಲು ಸುಪಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ. ಇದು ಹಿಟ್ ಆ್ಯಂಡ್ ರನ್ ಆಗಲ್ಲ, ಯಾವ ಏಜೆನ್ಸಿ, ಯಾರು ಭಾಗಿಯಾಗಿದ್ದಾರೆ, ಎಷ್ಟು ಹಣ ಕೊಟ್ಟಿದ್ದಾರೆ ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ, ಯಾವ್ಯಾವ ನಾಯಕರ ಪಿಎಗಳಿದ್ರು ಎಂಬ ಎಲ್ಲಾ ದಾಖಲೆಗಳಿವೆ.
ಸಿಸಿಟಿವಿ, ಆಡಿಯೋ, ವೀಡಿಯೋ ಸಮೇತ ದಾಖಲೆ ಇದೆ. ದಾಖಲೆ ಇರುವುದರಿಂದಲೇ ಸಿಎಂ ಕ್ಯಾಬಿನೆಟ್ನಲ್ಲಿ ಎಚ್ಚರಿಕೆ ನೀಡಿದ್ರು. ಒಂದು ವಾರದೊಳಗೆ ತನಿಖಾಧಿಕಾರಿ ಮುಂದೆ ಎಲ್ಲಾ ದಾಖಲೆಗಳನ್ನು ಇಡುತ್ತೇವೆ. ಮಾಧ್ಯಮಗಳ ಮುಂದೆಯೂ ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಟ್ರ್ಯಾಪ್ ಮಾಡಲು ಬಂದವರನ್ನು ಹಿಡಿಯದೇ ಬಿಟ್ಟಿದ್ದು ಯಾಕೆ? ಸಿಎಂಗೆ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ನನ್ನ ವಿರುದ್ಧವೇ ಶ್ತಿಂಗ್ ಆಪರೇಷನ್ ಗೆ ಯತ್ನಿಸಿದ್ದರು.. ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದರು ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಕೇಂದ್ರ ಸಚಿವ ಹೆಚ್. ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಯಾರೇ ಸಿಎಂ ಭೇಟಿಗೆ ಬಂದರೆ ಅವರು ಫೋನ್ ಹೊರಗಿಟ್ಟು ಹೋಗಬೇಕು. ಹೀಗಿರುವಾಗ ಟ್ರ್ಯಾಪ್ ಮಾಡಲು ಬಂದವರನ್ನು ಯಾಕೆ ಬಿಟ್ಟರು ಎಂದು ಪ್ರಶ್ನಿಸಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದು ಯಾರು? ಏನು ಅಂತಾ ಕಾಲಬಂದಾಗ ದಾಖಲೆ ಬಿಡ್ತಾರಂತೆ, ಇದು ಅವರಿಗೆ ಸುತ್ತಿಕೊಳ್ಳುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ಅವರನ್ನು ಟ್ರ್ಯಾಪ್ ಮಾಡುವ ಯತ್ನ ನಡೆದಿದೆ ಎಂದಾದರೆ ಯಾಕೆ ಅವರನ್ನು ಹಿಡಿಲಿಲ್ಲ, ನೀವು ಕಂಡು ಯಾಕೆ ಅವರನ್ನು ಬಿಟ್ಟಿದ್ದೀರಿ? ನೈಸ್ ಕಂಪನಿ ಮಾಲೀಕ ನಿಮ್ಮನ್ನು ಭೇಟಿ ಮಾಡಿದ ದೃಶ್ಯ ನೋಡಿದೆ. ಅವರು ಟ್ರ್ಯಾಪ್ ಮಾಡಲು ಬಂದಿದ್ರಾ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಟ್ರ್ಯಾಪ್ ಮಾಡಿದ್ದವರು ಯಾರು? ಸತೀಶ್, ಕೆ.ಎನ್. ರಾಜಣ್ಣರನ್ನು ಸೈಲೆಂಟ್ ಮಾಡಿದ್ದು ಯಾರು? ಎಂದು ಕೇಳಿದ ಕುಮಾರಸ್ವಾಮಿ, 134 ಮಂದಿ ಶಾಸಕರು ಇದ್ದಾರೆ. ಬಿಜೆಪಿ, ಜೆಡಿಎಸ್ನಲ್ಲಿ ಬೆಂಬಲ ಕೊಡುವವರು ಇದ್ದಾರೆ ಅಂತಾರೆ. ಸರ್ಕಾರ ಅಸ್ಥಿರ ಯಾಕೆ ಆಗುತ್ತೆ? ನಮಗೆ ಈಗ ಸರ್ಕಾರ ಅಸ್ಥಿರ ಮಾಡುವ ಶಕ್ತಿ ಇದೆಯಾ? ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತೀರಿ? ರಾಜಕೀಯ ವಾತಾವರಣ ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಹೇಳಿಕೆ ನೋಡಿ ಎಂಥಾ ಸಿಎಂ ಬಂದ್ರು ಅಂತಾ ಚರ್ಚೆ ಆಗ್ತಿದೆ. ಕ್ಯಾಬಿನೆಟ್ನಲ್ಲಿ ಚರ್ಚೆ ಆಗಿದ್ದು ಮಾಧ್ಯಮದಲ್ಲಿ ಬರಲು ಕಾರಣ ಏನು?ನೈಸ್ ಸುದ್ದಿ ಮುನ್ನೆಲೆಗೆ ಬರಬಾರದು ಎನ್ನುವುದು ಅವರ ಉದ್ದೇಶ. ನೈಸ್ ಅಕ್ರಮಗಳ ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರವಾಗಿದೆ. ಅದಕ್ಕಾಗಿ ಈ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದರು.
ನನ್ನ ಟ್ರ್ಯಾಪ್ ಮಾಡುತ್ತಿದ್ದಾರೆ, ಫೋಟೋ ಇದಾವೆ ಎನ್ನುತ್ತಾರೆ. ಇದರ ಪಿತಾಮಹ ಯಾರೆಂದು ಗೊತ್ತಿದೆ ಅಂತಾ ಸಿಎಂ ಹೇಳಿದ್ದಾರೆ. ಯಾರು ಆ ಪಿತಾಮಹ ಎಂಬುದನ್ನು ಜನರ ಮುಂದೆ ಇಡಿ. ಸಿದ್ದರಾಮಯ್ಯರನ್ನು ಟ್ರ್ಯಾಪ್ ಮಾಡಲು ಯತ್ನಿಸಿದ್ರು ಅನ್ನೋ ಸುದ್ದಿ ಇದೆ. ಯಾಕೆ ಇದನ್ನೆಲ್ಲಾ ಮುಚ್ಚಿಡುತ್ತಿದ್ದೀರಿ ಎಂದು ಕೇಳಿದರು.
ಕುಂಬಳಕಾಯಿ ಕಳ್ಳರಂತೆ ಅವರೇ ವರ್ತಿಸುತ್ತಿದ್ದಾರೆ. ಯಾರು ಪಿತಾಮಹ ಎಂಬುದರ ಬಗ್ಗೆ ತನಿಖೆಯಾಗಬೇಕು. ರಾಜ್ಯಪಾಲರ ಭೇಟಿಯಾದ ನಿಯೋಗದಲ್ಲಿ ಒಬ್ಬರು ಇದ್ದಾರೆ ಎಂದಿದ್ದಾರೆ. ಅವರು ಯಾರು ಅಂತಾ ಬಹಿರಂಗಪಡಿಸಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

