ಬೆಂಗಳೂರು: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2024- 25 ನೇ ಸಾಲಿನ ಅನುಷ್ಠಾನಕ್ಕಾಗಿ ರಾಜ್ಯದ ಕೃಷಿ ಇಲಾಖೆಗೆ ದೇಶದಲ್ಲೇ ಎರಡನೇ ಸ್ಥಾನ ದೊರೆತಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಕೃಷಿ ಇಲಾಖೆಯು ಪ್ರಶಂಸನಾ ಪತ್ರ ನೀಡಿದೆ.
ಯೋಜನೆ ಅನುಷ್ಠಾನದ ಒಟ್ಟಾರೆ ಪ್ರಗತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 27,04,166 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದು, 11,85,642 ರೈತರು 2094 ಕೋಟಿ ರೂ. ಕ್ಲೇಮ್ ಮಾಡಿದ್ದಾರೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ರಾಜ್ಯ ಕೃಷಿ ಇಲಾಖೆಗೆ ಪ್ರಶಂಸನಾ ಪತ್ರ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.
ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ! ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟಂತೆ, 2024 ರ ಖಾರಿಫ್ ಮತ್ತು 2024-25 ರ ಹಿಂಗಾರು ಋತುವಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಅಡಿಯಲ್ಲಿ ಅತ್ಯುತ್ತಮ ಸಾಧನೆಯಲ್ಲಿ ನಮ್ಮ ರಾಜ್ಯವು ದೊಡ್ಡ ರಾಜ್ಯಗಳಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಮರ್ಪಿತ ಪ್ರಯತ್ನಗಳಿಗಾಗಿ ಸೆಲ್ವಕುಮಾರ್, ವೈ.ಎಸ್. ಪಾಟೀಲ್ ಮತ್ತು ಇಡೀ ಕೃಷಿ ಇಲಾಖೆ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಿಎಂ ತಿಳಿಸಿದ್ದಾರೆ.

