ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಇಂದು ( ಜನವರಿ 18 ) ತೆರೆಬಿದ್ದಿದೆ. ಸತತ 112 ದಿನಗಳ ಮನರಂಜನೆ ಅಂತ್ಯ ಕಂಡಿದ್ದು, ಈ ಬಾರಿ ಗಿಲ್ಲಿ ನಟ ಟ್ರೋಫಿ ಎತ್ತಿಹಿಡಿದಿದ್ದಾರೆ.
ಫಿನಾಲೆಗೆ ಪ್ರವೇಶಿಸಿದ್ದ ಆರು ಸ್ಪರ್ಧಿಗಳ ಪೈಕಿ ಮೊದಲಿಗೆ ಧನುಷ್ ಎಲಿಮಿನೇಟ್ ಆಗಿ ಆರನೇ ಸ್ಥಾನ ಪಡೆದುಕೊಂಡರೆ, ಮ್ಯೂಟೆಂಟ್ ರಘು ಐದನೇ ಸ್ಥಾನ, ಕಾವ್ಯ ನಾಲ್ಕನೇ ಸ್ಥಾನ ಪಡೆದುಕೊಂಡರು. ಅಂತಿಮವಾಗಿ ಉಳಿದ ಮೂವರು ಸ್ಪರ್ಧಿಗಳನ್ನು ವೇದಿಕೆಗೆ ಕರೆತಂದು ಗಿಲ್ಲಿ ಹಾಗೂ ರಕ್ಷಿತಾ ಟಾಪ್ 2 ಎಂದು ಘೋಷಿಸಲಾಯಿತು. ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದುಕೊಂಡರು.
ಕೊನೆಗೆ ಒಂದೆಡೆ ಗಿಲ್ಲಿ ಕೈಹಿಡಿದು ಮತ್ತೊಂದೆಡೆ ರಕ್ಷಿತಾ ಕೈ ಹಿಡಿದ ಸುದೀಪ್ ಗಿಲ್ಲಿ ನಟ ವಿನ್ನರ್ ಎಂದು ಘೋಷಿಸುವ ಮೂಲಕ ಬಹು ದೊಡ್ಡ ಪ್ರಶ್ನೆ ಹಾಗೂ ಕುತೂಹಲಕ್ಕೆ ಪೂರ್ಣ ವಿರಾಮವಿಟ್ಟರು.
ಹೀಗೆ ಜನರ ಅಪಾರ ಪ್ರೀತಿ ಗಳಿಸಿ 40 ಲಕ್ಷಕ್ಕೂ ಹೆಚ್ಚು ವೋಟ್‌ಗಳನ್ನು ಪಡೆದು ವಿನ್ನರ್ ಆದ ಗಿಲ್ಲಿ ನಟನಿಗೆ 50 ಲಕ್ಷ ಬಹುಮಾನ ಧನ ದೊರಕಿತು. ಇಷ್ಟು ಮಾತ್ರವಲ್ಲದೇ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿದ್ದ ಮಾರುತಿ ಸುಜುಕಿ 20 ಲಕ್ಷ ಮೌಲ್ಯದ ವಿಕ್ಟೋರಿಸ್ ಕಾರನ್ನು ಉಡುಗೊರೆಯನ್ನಾಗಿ ನೀಡಿದೆ. ಜತೆಗೆ ಸ್ವತಃ ಕಿಚ್ಚ ಸುದೀಪ್ ನೀವು ಈ ಟ್ರೋಫಿಗೆ ಅರ್ಹರು ಎಂದು ಗಿಲ್ಲಿಯನ್ನು ಮೆಚ್ಚಿ 10 ಲಕ್ಷ ರೂಪಾಯಿಗಳನ್ನು ಗಿಲ್ಲಿಗೆ ಗೆಲುವಿಗೆ ಉಡುಗೊರೆ ನೀಡಿದ್ದಾರೆ.

