ನಿನ್ನೆ ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಮೂರು ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳು ಸೋಲನ್ನು ಕಂಡಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಬಿಜೆಪಿ ವಿರುದ್ಧ ಸೋತರೆ, ಕೇರಳದಲ್ಲಿ ಅಧಿಕಾರದಲ್ಲಿದ್ದ ಎಲ್‌ಡಿಎಫ್ ಯುಡಿಎಫ್ ಮುಂದೆ ಮಣ್ಣು ಮುಕ್ಕಿದೆ.
ಇನ್ನು ತಮಿಳುನಾಡಿನಲ್ಲಿ ಡಿಎಂಕೆ ಹೊಸ ಪಕ್ಷ ಟಿವಿಕೆ ವಿರುದ್ಧ ಸೋಲನ್ನು ಕಂಡಿದೆ. ಚುನಾವಣೆ ಫಲಿತಾಂಶಕ್ಕೂ ಮುನ್ನ ತಮಿಳುನಾಡಿನಲ್ಲಿ ಈ ರೀತಿಯ ಫಲಿತಾಂಶ ಹೊರಬೀಳಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ಅದರಲ್ಲೂ ಡಿಎಂಕೆ ಈ ಮಟ್ಟಿಗೆ ಹಿನ್ನಡೆ ಕಾಣಲಿದೆ ಎಂಬ ಸುಳಿವು ಯಾರಿಗೂ ಸಹ ಇರಲಿಲ್ಲ .
ಟಿವಿಕೆ 108 ಸ್ಥಾನಗಳಲ್ಲಿ ಗೆದ್ದಿದ್ದರೆ, ಡಿಎಂಕೆ ಕೇವಲ 59 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಹೀಗೆ ಹೀನಾಯ ಸ್ಥಿತಿ ತಲುಪಿದ ಡಿಎಂಕೆ ಕಂಡು ಬೆಂಬಲಿಗರು ನಡು ರಸ್ತೆಯಲ್ಲೇ ಕಣ್ಣೀರು ಹಾಕಿದ್ದರು. ಐದು ವರ್ಷಗಳ ಕಾಲ ಅಧಿಕಾರ ನಡೆಸಿ ಅಭಿವೃದ್ಧಿಗೆ ಇನ್ನೊಂದು ಹೆಸರೇ ಡಿಎಂಕೆ ಎನ್ನುವ ಹಾಗಿದ್ದರೂ ಜನರು ಕೈ ಹಿಡಿಯಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನು ಟಿವಿಕೆ ಪ್ರಚಂಡ ಮುನ್ನಡೆ ಸಾಧಿಸುತ್ತಿದ್ದಂತೆಯೇ ಡಿಎಂಕೆ ಮುಖ್ಯ ಕಚೇರಿ ಬಳಿ ವಿಜಯೋತ್ಸವಕ್ಕಾಗಿ ಹಾಕಲಾಗಿದ್ದ ಶಾಮಿಯಾನ ಹಾಗೂ ವೇದಿಕೆಗಳನ್ನು ತೆರವುಗೊಳಿಸಿ ಕಾರ್ಯಕರ್ತರು ಜಾಗ ಖಾಲಿ ಮಾಡಿದ್ದರು.
ಇತ್ತ ಸಂಜೆ ವೇಳೆ ತಮ್ಮ ಮುಖ್ಯ ಕಚೇರಿಗೆ ಬಂದ ಸ್ಟಾಲಿನ್ ಕಾರ್ಯಕರ್ತರನ್ನು ಭೇಟಿಯಾಗಿ ವಾಪಸ್ಸಾಗುವಾಗ ಕಾರು ಹತ್ತಬೇಕಾದರೆ ನೆರದಿದ್ದ ಜನರಿಗೆ ಕೈ ಮುಗಿದು ತೆರಳಿದರು. ಈ ವೇಳೆ ಅವರ ಕಣ್ಣುಗಳಲ್ಲಿ ನೀರು ತುಂಬಿದ್ದನ್ನು ಕಂಡ ಬೆಂಬಲಿಗರು ತೀವ್ರ ಬೇಸರಕ್ಕೊಳಗಾದರು.

