ಬೆಂಗಳೂರು:ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 8 ಆರೋಪಿಗಳನ್ನು ಬಂಧಿಸಿದ್ದಾರೆ.
ತುಮಕೂರು, ರಾಮನಗರ, ಕಲಬುರಗಿ ಶಾಲೆಗಳ ಶಿಕ್ಷಕರು ಸೇರಿ 8 ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ.ಗಿರೀಶ್, ಕಲಬುರಗಿ ಶಾಲೆಯ ಶಿಕ್ಷಕರಾದ ಶಾಹಿದಾ ಬೇಗಂ, ಫರ್ಜಾನಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ, ರಾಮನಗರದ ಶಿಕ್ಷಕ ಅಹ್ಮದ್ ಖಾನ್ ರನ್ನು ಬಂಧಿಸಲಾಗಿದೆ. ಇವರೆಲ್ಲರೂ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

