ಶ್ರೀನಗರ: ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಐದು ಡ್ರೋನ್ ಗಳು ಪತ್ತೆಯಾಗಿವೆ. ಗಣರಾಜ್ಯೋತ್ಸವಕ್ಕೂ ಮುನ್ನ ಪಾಕಿಸ್ತಾನ ಭಾರತದ ಗಡಿಗಳ ಬಳಿ ಡ್ರೋನ್ ಚಟುವಟಿಕೆಗಳನ್ನು ಹೆಚ್ಚಿಸಿದ್ದು ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದಾರೆ.
ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಮತ್ತು ಎಲ್ ಒಸಿಯ ವಿವಿಧ ಪ್ರದೇಶಗಳಲ್ಲಿ ಒಟ್ಟು ಐದು ಡ್ರೋನ್ ಗಳು ಪತ್ತೆಯಾಗಿವೆ. ಪೂಂಚ್, ನೌಶೇರಾ, ಧರ್ಮಶಾಲಾ, ರಾಮಗಢ ಮತ್ತು ಪರಾಖ್ ಪ್ರದೇಶಗಳಲ್ಲಿ ಡ್ರೋನ್ ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಎಲ್ಲಾ ಡ್ರೋನ್ ಗಳು ಭಾರತದ ಗಡಿ ಪ್ರದೇಶದಲ್ಲಿ ಕೆಲ ನಿಮಿಷಗಳ ಕಾಲ ಹಾರಾಡಿ ಹಿಂತಿರುಗಿವೆ. ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಡ್ರೋನ್ ಗಳು ಪತ್ತೆಯಾಗುತ್ತಿದ್ದಂತೆ ಭಾರತೀಯ ಸೇನೆ ತಕ್ಷಣ ಪ್ರತಿಕ್ರಿಯೆ ನೀಡಿ ಅದರ ಮೇಲೆ ಗುಂಡು ಹಾರಿಸಿದೆ.
ಇನು ಶ್ರುಕ್ರವಾರ ಕೂಡ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಬಳಿಯ ಘಗ್ವಾಲ್ ಪಲೋರಾ ಗ್ರಾಮದಲ್ಲಿ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬೀಳಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದ್ದು, ಹೈ ಅಲರ್ಟ್ ಘೋಷಿಸಿದೆ.

