HomeLatest Newsಕರ್ನಾಟಕದಲ್ಲಿ ಹಣ ಗಳಿಸಲು ಕನ್ನಡ ಚಿತ್ರಗಳ ಒದ್ದಾಟ; ರಾಜ್ಯದಲ್ಲಿ 100 ಕೋಟಿ ಬಾಚಿ ಗೆದ್ದುಬೀಗಿದವು...

ಕರ್ನಾಟಕದಲ್ಲಿ ಹಣ ಗಳಿಸಲು ಕನ್ನಡ ಚಿತ್ರಗಳ ಒದ್ದಾಟ; ರಾಜ್ಯದಲ್ಲಿ 100 ಕೋಟಿ ಬಾಚಿ ಗೆದ್ದುಬೀಗಿದವು ಈ ವರ್ಷ ತೆರೆಕಂಡ ಈ 3 ಹಾಲಿವುಡ್ ಚಿತ್ರಗಳು!

ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಹೆಚ್ಚೇನೂ ಫಸಲು ತಂದುಕೊಟ್ಟಿಲ್ಲ. ಮೊದಲ ಏಳು ತಿಂಗಳು ಕಳೆದರೂ ಒಂದೇ ಒಂದು ಚಿತ್ರವೂ ಐವತ್ತು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿಲ್ಲ. ವಾರಕ್ಕೆ ಐದಾರು ಚಿತ್ರಗಳು ತೆರೆಗೆ ಬಂದರೂ ಸಿನಿ ರಸಿಕರಿಗೆ ಬಹುಪಾಲು ಚಿತ್ರಗಳ ಹೆಸರುಗಳ ಪರಿಚಯವೇ ಇಲ್ಲ ಎಂದು ಹೇಳಿದರೂ ತಪ್ಪಾಗದು.

ಇನ್ನು ಇಷ್ಟರ ಮಟ್ಟಿಗೆ ದೊಡ್ಡ ಸಂಖ್ಯೆಯಲ್ಲಿ ಚಿತ್ರಗಳು ಬಿಡುಗಡೆಯಾದರೂ ಬೃಹತ್ ಹೆಸರು ಮಾಡಿದ ಚಿತ್ರವೆಂಬ ಚರ್ಚೆಗೆ ಕುಳಿತರೆ ಸಿಗುವ ಸಂಖ್ಯೆ ಶೂನ್ಯ. ಹೌದು, ಈ ವರ್ಷ ಕನ್ನಡದ ಯಾವ ಚಿತ್ರವೂ ಕಂಟೆಂಟ್ ವಿಚಾರವಾಗಿ ಹಾಗೂ ಬಾಕ್ಸ್ ಆಫೀಸ್ ಎರಡರಲ್ಲೂ ಸಮಾನವಾಗಿ ಸದ್ದು ಮಾಡಲಿಲ್ಲ.

ಲವ್ ಮಾಕ್ಟೇಲ್ 3 ತನ್ನ ಬಜೆಟ್‌ಗೆ ಹೋಲಿಕೆ ಮಾಡಿದರೆ ಒಳ್ಳೆಯ ಲಾಭ ತಂದುಕೊಟ್ಟ ಏಕೈಕ ಕನ್ನಡ ಚಿತ್ರ ಎನ್ನಬಹುದು. ಇನ್ನೂ ಕೆಲ ಚಿತ್ರಗಳು ಲಾಭ ಗಳಿಸಿವೆಯಾದರೂ ಅವು ಹತ್ತು ಕೋಟಿ ದಾಟಿಲ್ಲ. ಹೀಗೆ ರಾಜ್ಯದಲ್ಲೇ ಕನ್ನಡ ಚಿತ್ರಗಳು ಪಲ್ಟಿ ಹೊಡೆದಿದ್ದು, ಗಡಿ ದಾಟಿ ಆಚೆ ಸದ್ದು ಮಾಡಿದ ಚಿತ್ರ ಒಂದೂ ಇಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಟ್ಟಿಗೆ ತನ್ನದೇ ನೆಲದಲ್ಲಿ ಕನ್ನಡ ಚಿತ್ರಗಳು ಮುಗ್ಗರಿಸುತ್ತಿರುವುದಕ್ಕೆ ಕಾರಣವೇನು ಎಂಬ ಚರ್ಚೆಗಳು ನಡೆದಿದ್ದು, ಜನರು ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡಿರುವುದೂ ಸಹ ಒಂದು ಕಾರಣ ಎಂದು ಕೆಲ ಮಂದಿ ಅಭಿಪ್ರಾಯ ತಿಳಿಸುತ್ತಾರೆ. ಆದರೆ ಇದೇ ವರ್ಷ ತೆರೆಗೆ ಬಂದ ಹಾಲಿವುಡ್ ಚಿತ್ರಗಳು ಈ ಅಭಿಪ್ರಾಯಗಳು ಸುಳ್ಳು ಎಂದು ಸಾಬೀತುಪಡಿಸಿವೆ. ಒಳ್ಳೆಯ ಚಿತ್ರಗಳನ್ನು ಮಾಡಿದರೆ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.

ಹೌದು, ಅಬ್ಸೆಷನ್, ದಿ ಆಡಿಸ್ಸಿ ಹಾಗೂ ಸ್ಪೈಡರ್‌ಮ್ಯಾನ್ ಬ್ರಾಂಡ್ ನ್ಯೂ ಡೇ ಚಿತ್ರಗಳು ಒಟ್ಟಾರೆಯಾಗಿ ಕರ್ನಾಟಕದಲ್ಲಿ ನೂರು ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಮೇ 29ರಂದು ಬಿಡುಗಡೆಯಾದ ಅಬ್ಸೆಷನ್ ಕರ್ನಾಟಕದಲ್ಲಿ 40 ದಿನಗಳಲ್ಲಿ 24 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿತು. ಬಳಿಕ ಜುಲೈ 17ರಂದು ತೆರೆಗೆ ಬಂದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಬೃಹತ್ ಸಿನಿಮಾ ದಿ ಆಡಿಸ್ಸಿ 18 ದಿನಗಳಲ್ಲಿ ಕರ್ನಾಟಕದಲ್ಲಿ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತು. ಬೆನ್ನಲ್ಲೇ ತೆರೆಗೆ ಬಂದ ಸ್ಪೈಡರ್‌ಮ್ಯಾನ್ ಬ್ರಾಂಡ್ ನ್ಯೂ ಡೇ 5 ದಿನಗಳಲ್ಲಿ 42 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೀಗೆ ಕಳೆದ ಮೂರು ತಿಂಗಳಲ್ಲಿ ತೆರೆಗೆ ಬಂದ ಈ ಮೂರು ಚಿತ್ರಗಳು ರಾಜ್ಯದಲ್ಲಿ ನೂರು ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಕಂಟೆಂಟ್ ಈಸ್ ದ ಕಿಂಗ್ ಎಂದು ಮತ್ತೊಮ್ಮೆ ಸಾಬೀತುಪಡಿಸಿವೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular