ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ ದ್ವೀಪದ ಸಮೀಪ ಭಾರತೀಯ ಪ್ರವಾಸಿಗರನ್ನು ಹೊತ್ತ ವೇಗದ ದೋಣಿ (ಸ್ಪೀಡ್ಬೋಟ್) ಉರುಳಿದ ಪರಿಣಾಮ ಕನಿಷ್ಠ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ದೋಣಿಯಲ್ಲಿ 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಫು ಕ್ವಾಕ್ ಸಮೀಪದ ಹೋನ್ ಮೇ ರುಟ್ ನ್ಗೋಯ್ (Hon May Rut Ngoai) ದ್ವೀಪದ ಬಳಿ ದೋಣಿ ಅಪಘಾತಕ್ಕೀಡಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ಆಡಳಿತ ಮತ್ತು ರಕ್ಷಣಾ ತಂಡಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಹಲವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಕಾರಣ ಘಟನೆಗೆ ಸಂಬಂಧಿಸಿದ ನಿಖರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದೆ. ಅಲ್ಲದೆ, ಸಂತ್ರಸ್ತರ ಕುಟುಂಬಗಳ ನೆರವಿಗಾಗಿ ಹೋ ಚಿ ಮಿನ್ ನಗರದಲ್ಲಿರುವ ಭಾರತೀಯ ಕಾನ್ಸುಲೇಟ್ ಮತ್ತು ಹನೋಯ್ನಲ್ಲಿರುವ ರಾಯಭಾರ ಕಚೇರಿಯಲ್ಲಿ ಸಹಾಯವಾಣಿ (ಕಂಟ್ರೋಲ್ ರೂಂ) ತೆರೆಯಲಾಗಿದೆ.
ದೋಣಿ ಏಕೆ ಉರುಳಿತು ಎಂಬುದರ ಕುರಿತು ಸ್ಥಳೀಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅಪಘಾತದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

