ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಿರುವಾಗ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ.
ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಅವರನ್ನು ಭೇಟಿ ಮಾಡಿದೆ. ನಿಯೋಗದಲ್ಲಿ ಈ ವೇಳೆ ಸಚಿವ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಎ.ಸಿ. ಶ್ರೀನಿವಾಸ್, ಎಂಎಲ್‌ಸಿ ಪುಟ್ಟಣ್ಣ, ಶ್ರೀನಿವಾಸ್ ಮತ್ತಿತರರು ಇದ್ದರು.
ಮನವಿ ಏನು?: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದಲ್ಲಿಯೂ ನಡೆಯಲಿದೆ. ಆದ್ದರಿಂದ ದೋಷಮುಕ್ತ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯನ್ನು ನ್ಯಾಯಬದ್ಧವಾಗಿ ಮಾಡುವಂತೆ ಮನವಿ ಸಲ್ಲಿಸಲಾಯಿತು. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು, ಮನೆ-ಮನೆ ಸಮೀಕ್ಷೆಯ ಮೂಲಕ ಪಾರದರ್ಶಕ ಹಾಗೂ ದೋಷಮುಕ್ತ ಪಟ್ಟಿಯನ್ನು ಸಿದ್ಧಪಡಿಸುವುದು ಆಯೋಗದ ಆದ್ಯತೆಯಾಗಲಿ ಎಂದು ಒತ್ತಾಯಿಸಲಾಗಿದೆ.
ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ವಿರೋಧಿಸುತ್ತಿದೆ. ಈ ಕುರಿತು ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಹೋರಾಟವನ್ನೇ ನಡೆಸಿತ್ತು. ಈಗ ಎಸ್‌ಐಆರ್ ಪ್ರಕ್ರಿಯೆ ಪಶ್ಚಿಮ ಬಂಗಾಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟಿಎಂಸಿ ನಾಯಕಿ, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕುರಿತು ಸುಪ್ರೀಂಕೋರ್ಟ್ ತನಕ ಹೋಗಿದ್ದಾರೆ.
ಕರ್ನಾಟಕದಲ್ಲಿಯೂ ಈಗ ಎಸ್‌ಐಆರ್ ಪ್ರಾರಂಭವಾಗಲಿದೆ. ಆದ್ದರಿಂದ ಕಾಂಗ್ರೆಸ್ ನಾಯಕರು ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ.
ಎಸ್‌ಐಆರ್ ಬಗ್ಗೆ ಸ್ಪಷ್ಟನೆ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಮತದಾರರ ಪಟ್ಟಿಗೆ ಮ್ಯಾಪಿಂಗ್ ಎಂದರೆ ಭಾರತ ಚುನಾವಣಾ ಆಯೋಗವು ಪ್ರಸ್ತುತ ಸಾಲಿನಲ್ಲಿ ಮತದಾರರ ಪಟ್ಟಗಳ ಸಮಗ್ರ ಪರಿಷ್ಕರಣೆಯನ್ನು ನಡೆಸಲು ಉದ್ದೇಶಿಸಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2002ರ ಸಾಲಿನಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯು ನಡೆದಿರುತ್ತದೆ.
ಈ ಪ್ರಕಾರವಾಗಿ 2002ರ ಸಾಲಿನ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರದಂತೆ ಎಲ್ಲಾ ಮತದಾರರ ವಿವರಗಳನ್ನು ಅಗತ್ಯ ದಾಖಲಾತಿಗಳನ್ನು ಪಡೆದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿರುತ್ತದೆ. ಅದರಂತೆ, ಪ್ರಸ್ತುತ 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರ ಪೈಕಿ, 2002ರ ಮತದಾರರ ಪಟ್ಟಯಲ್ಲಿದ್ದ ಮತದಾರರ ವಿವರಗಳನ್ನು ಹೊಂದಾಣಿಕೆ ಮಾಡಿ ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯಾಗಿದೆ.
ಪ್ರತಿಯೊಂದು ಮತಗಟ್ಟೆಗೆ ನೇಮಕ ಮಾಡಲಾದ ಮತಗಟ್ಟೆ ಅಧಿಕಾರಿಯು ಮ್ಯಾಪಿಂಗ್ ಕಾರ್ಯ ನಿರ್ವಹಿಸುತ್ತಾರೆ. ನೇಮಿಸಲಾದ ಮತಗಟ್ಟೆ ಅಧಿಕಾರಿಯು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ BLO App ತಂತ್ರಾಂಶವನ್ನು ಬಳಸಿ, 2025 ರ ಮತದಾರರ ಪಟ್ಟಗೆ 2002 ರ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ಹೊಂದಾಣಿಕೆ ಮಾಡಿ ಪರಿಶೀಲಿಸಿ, ಮ್ಯಾಪಿಂಗ್ ಕಾರ್ಯವನ್ನು ನಿರ್ವಹಿಸಲಾಗುತ್ತದೆ.
2025ರ ಮತದಾರರ ಪಟ್ಟಿಗೆ 2002ರ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ಹೊಂದಾಣಿಕೆ ಮಾಡಲಾದ ಮತದಾರರ ಕುಟುಂಬದ ಸಂತತಿ (ಮಗ, ಮಗಳು, ಮೊಮ್ಮಗ ಅಥವಾ ಮೊಮ್ಮಗಳು) ಅವರನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯಾಗಿದೆ.
ಮ್ಯಾಪಿಂಗ್ ಮಾಡಲಾದ ಮತದಾರರು ಮತದಾರರ ಸಮಗ್ರ ಪರಿಷ್ಕರಣಿ (Special Intensive Revision) ಸಂದರ್ಭದಲ್ಲಿ ಮನೆ-ಮನೆಗೆ ಭೇಟಿ ನೀಡುವ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗಿರುತ್ತದೆ. ಹೊರತುಪಡಿಸಿ, ಮತದಾರರ ಮ್ಯಾಪಿಂಗ್ ಕಾರ್ಯಕ್ಕೆ ಸ್ಪಂದಿಸದೇ ಇದ್ದ ಪಕ್ಷದಲ್ಲಿ ಅಥವಾ ಮಾಹಿತಿ ನೀಡದೇ ಇದ್ದ ಪಕ್ಷದಲ್ಲ, ಅಂತಹ ಮತದಾರರು ಮುಂಬರುವ ಮತದಾರರ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಭಾರತ ಪ್ರಜೆ ಎಂದು ಪ್ರಮಾಣೀಕರಿಸಲು ಆಯೋಗವು ನಿಗಧಿಪಡಿಸಿರುವ 11 ಬಗೆಯ ದಾಖಲಾತಿಗಳ ಪೈಕಿ ಒಂದನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

