ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರಿಯುತ್ತಿದೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಡಿಸೆಂಬರ್ 2025ರಲ್ಲಿ ಬಾಂಗ್ಲಾದಲ್ಲಿ ನಡೆದ ಹಿಂದೂ ಪುರುಷರ ಹತ್ಯೆಗಳು ಕೇವಲ ಅಪರಾಧಗಳಲ್ಲ. ಬದಲಾಗಿ ಅವು ಅಲ್ಲಿನ ಹಿಂದೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸುದೀರ್ಘ ಕಿರುಕುಳದ ಒಂದು ಭಾಗವಾಗಿವೆ.
ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ 12 ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ಹೆಚ್ಚಿನವು ಗುಂಪು ಹಿಂಸಾಚಾರ ಮತ್ತು ಕಾನೂನುಬಾಹಿರ ಶಿಕ್ಷೆಗಳ ಮೂಲಕ ನಡೆದಿದ್ದು, ರಾಜಕೀಯ ಅಸ್ಥಿರತೆಯು ಧಾರ್ಮಿಕ ಉಗ್ರವಾದ ಮತ್ತು ಕಾನೂನು ವೈಫಲ್ಯದೊಂದಿಗೆ ಬೆರೆತಾಗ ಅಲ್ಪಸಂಖ್ಯಾತರು ಎಷ್ಟು ಬೇಗ ಅಪಾಯಕ್ಕೆ ಸಿಲುಕುತ್ತಾರೆ? ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.
ಬಾಂಗ್ಲಾದಲ್ಲಿ ಹತ್ಯೆಯಾದವರು ದೀಪು ಚಂದ್ರ ದಾಸ್, ಅಮೃತ್ ಮೊಂಡಲ್, ದಿಲೀಪ್ ಬರ್ಮನ್, ಪ್ರಂತೋಷ್ ಕರ್ಮಕರ್, ಉತ್ಪಲ್ ಸರ್ಕಾರ್, ಜೋಗೇಶ್ ಚಂದ್ರ ರಾಯ್, ಸುಬರ್ಣ ರಾಯ್, ಶಾಂತೋ ದಾಸ್, ರಿಪನ್ ಕುಮಾರ್ ಸರ್ಕಾರ್, ಪ್ರತಾಪ್ ಚಂದ್ರ, ಸ್ವಾಧೀನ್ ಚಂದ್ರ ಮತ್ತು ಪಲಾಶ್ ಚಂದ್ರ ಹೀಗೆ ಸಾಗುತ್ತದೆ ಹಿಂದೂಗಳ ಹೆಸರುಗಳು.
ಆದರೆ ಅಲ್ಲಿನ ಅಧಿಕಾರಿಗಳು ಪ್ರತಿಯೊಂದು ಹತ್ಯೆಯೂ ಪ್ರತ್ಯೇಕ ಘಟನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಒಟ್ಟಾರೆ ಘಟನಾವಳಿಗಳು ಇದು ಕೇವಲ ಕಾಕತಾಳೀಯವಲ್ಲ, ಬದಲಿಗೆ ವ್ಯವಸ್ಥಿತವಾಗಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಸುರಕ್ಷಿತ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಕಿರುಕುಳ ಆ ದೇಶದ ಸಾಮಾಜಿಕ, ರಾಜಕೀಯ ವ್ಯವಸ್ಥೆಯೊಳಗೆ ಆಳವಾಗಿ ಬೇರೂರಿದ ಉಗ್ರವಾದದ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ನಿರಂತರವಾದ ಭಾರತ ವಿರೋಧಿ ಭಾಷಣಗಳಿಂದ ಉತ್ತೇಜಿತವಾಗಿರುವ ಕೋಮು ಧರ್ಮಾಂಧತೆಯು, ಅಲ್ಪಸಂಖ್ಯಾತರು ವಾಸಿಸುವ ಪರಿಸರವನ್ನು ಹಂತಹಂತವಾಗಿ ಹದಗೆಡಿಸಿವೆ. ಹಿಂದೂಗಳ ಮೇಲಿನ ಹಗೆತನವನ್ನು ಉಗ್ರವಾದ ಎಂದು ಕರೆಯುವ ಬದಲು, ಅದನ್ನು ಒಂದು ವೈಚಾರಿಕ ಪ್ರತಿರೋಧ ಎಂಬಂತೆ ಬಿಂಬಿಸಲಾಗುತ್ತಿದೆ.
ಬದಲಾವಣೆ, ಸುಧಾರಣೆ ಮತ್ತು ವಿದ್ಯಾರ್ಥಿ ನೇತೃತ್ವದ ಚಳವಳಿ ಎಂಬ ಹೆಸರನ್ನು ಇದಕ್ಕಾಗಿ ಸಮರ್ಥನೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ನಿರೂಪಣೆಗಳನ್ನು ಗಮನಿಸಿದರೆ ಉಗ್ರಗಾಮಿ ಕಾರ್ಯಸೂಚಿ ಮುನ್ನಡೆಸಲು, ಭಾರತಕ್ಕೆ ನಿರಂತರವಾಗಿ ಕಿರಿಕಿರಿ ನೀಡಲು ಬಳಸಿಕೊಳ್ಳಲಾಗುತ್ತಿದೆ. ದಕ್ಷಿಣದ ಪ್ರಮುಖ ಧ್ವನಿಯಾಗಿ ಬೆಳೆಯುತ್ತಿರುವ ಭಾರತದ ವರ್ಚಸ್ಸಿಗೆ ವಿರುದ್ಧವಾಗಿ ಬಾಂಗ್ಲಾದೇಶವನ್ನು ನಿಲ್ಲಿಸುವ ಪ್ರಯತ್ನವಾಗಿದೆ. ಈ ಸೈದ್ಧಾಂತಿಕ ಸಂಘರ್ಷದಲ್ಲಿ ಆ ದೇಶದ ಅಲ್ಪಸಂಖ್ಯಾತರು ಅನಿವಾರ್ಯವಾಗಿ ಬಲಿಪಶುಗಳಾಗುತ್ತಿದ್ದಾರೆ.
ಡಿಸೆಂಬರ್ ಹತ್ಯೆಗಳು: ಡಿಸೆಂಬರ್ ತಿಂಗಳಿನಲ್ಲಿ ನಡೆದ ಹತ್ಯೆಗಳಲ್ಲಿ ಹೆಚ್ಚಿನವು ಧರ್ಮನಿಂದನೆಯ ಆರೋಪಗಳ ಬಳಿಕ ನಡೆದಿವೆ. ಈ ಆರೋಪ ಹಿಂದೂಗಳನ್ನು ಗುರಿ ಮಾಡಲು ಬಳಸಲಾಗುವ ಒಂದು ಪ್ರಬಲ ಆಯುಧವಾಗಿ ಮಾರ್ಪಟ್ಟಿದೆ. ಇಂತಹ ಆರೋಪಗಳು ಯಾವುದೇ ಪುರಾವೆಗಳಿಲ್ಲದೆ ಅಥವಾ ಅಧಿಕೃತ ತನಿಖೆಯಿಲ್ಲದೆಯೇ ಹೊರಹೊಮ್ಮುತ್ತವೆ. ಆದರೂ ಇವು ಜನಸಮೂಹವನ್ನು ಪ್ರಚೋದಿಸಲು ಮತ್ತು ಹಿಂಸಾಚಾರಕ್ಕೆ ಕಾನೂನುಬದ್ಧ ಮುಖವಾಡ ನೀಡಲು ಸಾಕಾಗುತ್ತವೆ.

ಇತರ ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರು ಸುಲಿಗೆ ಅಥವಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಎಲ್ಲಾ ಪ್ರಕರಣಗಳ ಅಂತಿಮ ಫಲಿತಾಂಶ ಒಂದೇ ಆಗಿತ್ತು ಅಧಿಕೃತ ಬಂಧನ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಬದಲಾಗಿ ಗುಂಪು ನ್ಯಾಯ ಜಾರಿಗೊಂಡಿದೆ.
ಈಗ ದೀಪು ಚಂದ್ರ ದಾಸ್ ಹತ್ಯೆಯನ್ನು ನೋಡೋಣ. ಮೈಮನ್‌ಸಿಂಗ್ ಜಿಲ್ಲೆಯ ಹಿಂದೂವಾದ ಈಗ ಗಾರ್ಮೆಂಟ್ಸ್ ಉದ್ಯೋಗಿ. ಅವರ ಹತ್ಯೆಯು ಅಲ್ಲಿನ ಭಯಾನಕ ಪರಿಸ್ಥಿತಿಗೆ ಒಂದು ಸ್ಪಷ್ಟ ಉದಾಹರಣೆ. ಕೆಲಸದ ಸ್ಥಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಉದ್ರಿಕ್ತ ಗುಂಪು ಅವರ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಹಾಕಿ, ನೇಣು ಬಿಗಿದು ನಂತರ ಬೆಂಕಿ ಹಚ್ಚಿದೆ.
ತನಿಖಾಧಿಕಾರಿಗಳು ನಂತರ ಈ ಧರ್ಮನಿಂದನೆಗೆ ಯಾವುದೇ ನೇರ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ರಕ್ಷಣಾ ವ್ಯವಸ್ಥೆಗಳು ಕುಸಿದಾಗ, ದೃಢೀಕರಿಸದ ಆರೋಪಗಳು ಎಷ್ಟು ಸುಲಭವಾಗಿ ಸಾರ್ವಜನಿಕ ಮರಣದಂಡನೆಯಾಗಿ ಬದಲಾಗುತ್ತವೆ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ.
ಅಮೃತ್ ಮೊಂಡಲ್ ಅವರನ್ನು ಹೊಡೆದು ಕೊಲ್ಲಲಾಗಿದೆ. ಆದರೆ ಅಧಿಕಾರಿಗಳು ಪ್ರಕರಣದ ಕೋಮು ಸಂಘರ್ಷದ ಆಯಾಮ ತಳ್ಳಿಹಾಕಿದರು. ಅವರ ಮೇಲಿದ್ದ ಹಳೆಯ ಕ್ರಿಮಿನಲ್ ಹಿನ್ನೆಲೆಯನ್ನು ಮುನ್ನಲೆಗೆ ತಂದರು. ಆದರೆ ಆರೋಪಗಳು ಏನೇ ಇರಲಿ, ಅಧಿಕೃತ ಬಂಧನದ ಬದಲಾಗಿ ಜನರ ಗುಂಪಿಗೆ ಸಿಕ್ಕಿ ಅವರು ಮರಣ ಹೊಂದಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆರೋಪಿಗಳಿಗೆ ನ್ಯಾಯ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಹಿಂದೂಗಳ ಆತಂಕವನ್ನು ಮತ್ತಷ್ಟು ಬಲಪಡಿಸಿದೆ.
ಈ ಹತ್ಯೆಗಳು ಹಲವಾರು ಜಿಲ್ಲೆಗಳಲ್ಲಿ ಕಾನೂನು ಮತ್ತು ಆಡಳಿತ ಹೇಗೆ ಕುಸಿದಿದೆ ಎಂಬುದನ್ನು ತೋರಿಸುತ್ತಿವೆ. ಪ್ರತಿಭಟನೆಗಳು ಹಾಗೂ ರಾಜಕೀಯ ಅಸ್ಥಿರತೆಯ ನಡುವೆ ಈ ಘಟನೆ ನಡೆದಿದೆ ಎಂದು ಸಬೂಬು ಹೇಳಲಾಗುತ್ತಿದೆ. ಹಿಂದೂ ಸಮುದಾಯಗಳು ಮತ್ತೊಮ್ಮೆ ಅಪಾಯಕ್ಕೆ ಸಿಲುಕಿದೆ. ಅವರಿಗೆ ರಾಜಕೀಯವಾಗಿ ರಕ್ಷಣೆ ಇಲ್ಲ ಎಂಬ ಕಾರಣಕ್ಕಾಗಿ ಗುರಿಯಾಗಿಸಲಾಗುತ್ತಿದೆ.
ಧರ್ಮವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇಸ್ಲಾಮಿಕ್ ಗುಂಪುಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಚುನಾವಣೆಗೂ ಮುನ್ನ ಬೆಂಬಲವನ್ನು ಪಡೆಯಲು ಧಾರ್ಮಿಕತೆಯನ್ನು ಅವಲಂಬಿಸಿವೆ. ಆಡಳಿತದ ಬಗ್ಗೆ ಯಾವುದೇ ಭಯವಿಲ್ಲದ ಕಾರಣ ಈ ಗುಂಪುಗಳು ಧರ್ಮ ಗುರುತಿನ ಆಧಾರಿತವಾಗಿ ಹಿಂದೂಗಳನ್ನು ಸುಲಭವಾಗಿ ಗುರಿಯಾಗಿಸುತ್ತಿದ್ದಾರೆ.
ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಹತ್ಯೆಗಳನ್ನು ಖಂಡಿಸಿದೆ ಮತ್ತು ಗುಂಪು ನ್ಯಾಯದ ವಿರುದ್ಧ ತನ್ನ ವಿರೋಧವನ್ನು ಪುನರುಚ್ಚರಿಸಿದೆ. ಕೆಲವು ಘಟನೆಗಳ ನಂತರ ಬಂಧನಗಳೂ ನಡೆದಿವೆ, ಆದರೆ ಹಿಂದೂ ಅಲ್ಪಸಂಖ್ಯಾತರಿಗೆ ಇಂತಹ ಕ್ರಮಗಳು ಹೆಚ್ಚಿನ ಭರವಸೆಯನ್ನೇನೂ ನೀಡಿಲ್ಲ. ಮುನ್ನೆಚ್ಚರಿಕೆ ಕ್ರಮಗಳು, ತ್ವರಿತ ಮಧ್ಯಪ್ರವೇಶ ಮತ್ತು ನಿರಂತರ ಹೊಣೆಗಾರಿಕೆಯ ಅಗತ್ಯವಿದೆ.
ಹಿಂದೂಗಳಿಗೆ ಕಿರುಕುಳ, ದೌರ್ಜನ್ಯ ದೇಶದಲ್ಲಿ ಒಂದು ಪುನರಾವರ್ತಿತ ಪ್ರಕ್ರಿಯೆಯಂತಾಗಿದೆ. ಸಾವುಗಳು ಮತ್ತು ಇತರೆ ಪ್ರಕರಣಗಳು ಯಾವುದೇ ಬದಲಾವಣೆಯನ್ನು ತರಲು ವಿಫಲವಾಗುತ್ತಿವೆ. ಹಿಂದೂ ಅಲ್ಪಸಂಖ್ಯಾತರ ಹತ್ಯೆಗಳು ಕೇವಲ ಅನಿರೀಕ್ಷಿತ ಘಟನೆಗಳಲ್ಲ ಅವು ರಾಜಕೀಯ ಅಸ್ಥಿರತೆ, ಉಗ್ರಗಾಮಿ ಸಂಘಟನೆ ಮತ್ತು ಭಾರತ ವಿರೋಧಿ ನಿಲುವುಗಳು ಒಂದೆಡೆ ಸೇರಿರುವ ಒಂದು ಮಾದರಿಯಾಗಿದೆ.

