ಎಚ್.ಮೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ, ಕಾಂಗ್ರೆಸ್ ಸೇರಿ ಒಟ್ಟು 9 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಪ್ರಚಾರ ಬಿರುಸಿನಿಂದ ಸಾಗಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾರಣಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಪೊಲೀಸರು ಸಹ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ, ಚುನಾವಣೆಗೆ ಸಂಬಂಧಪಟ್ಟ ಸಾರ್ವಜನಿಕರ ದೂರುಗಳನ್ನು ತಕ್ಷಣ ಸ್ವೀಕರಿಸಿ ಕ್ರಮಕೈಗೊಳ್ಳಲು ಜಿಲ್ಲಾ ಆಡಳಿತ ಭವನದಲ್ಲಿ ವಿಶೇಷ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.
ಪೊಲೀಸರ ಪ್ರಕಟಣೆ: ಬಾಗಲಕೋಟೆ ಜಿಲ್ಲಾ ಪೊಲೀಸರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ, ಚುನಾವಣೆಗೆ ಸಂಬಂಧಪಟ್ಟ ಸಾರ್ವಜನಿಕರ ದೂರುಗಳನ್ನು ತಕ್ಷಣ ಸ್ವೀಕರಿಸಿ ಕ್ರಮಕೈಗೊಳ್ಳಲು ಜಿಲ್ಲಾ ಆಡಳಿತ ಭವನದಲ್ಲಿ ವಿಶೇಷ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ, ಹಣ ಅಥವಾ ಬಲ ಪ್ರಯೋಗ ಸೇರಿದಂತೆ ಉಪ ಚುನಾವಣೆಗೆ ಸಂಬಂಧಿಸಿದ ಯಾವುದೇ ಅಕ್ರಮಗಳ ಕುರಿತು ಸಾರ್ವಜನಿಕರು ದೂರು ನೀಡಬಹುದಾಗಿದೆ.
ಜಿಲ್ಲಾಡಳಿತ ಭವನದ ಕಂಟ್ರೋಲ್ ರೂಂ 08354-252100 ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂ 08354-235374 ಹಾಗೂ ಪೊಲೀಸ್ ಕಂಟ್ರೋಲ್ ರೂಂ 08354-235079ಗೆ ಜನರು ಕರೆ ಮಾಡಬಹುದಾಗಿದೆ.
ಸ್ವೀಕರಿಸಲಾದ ಪ್ರತಿಯೊಂದು ದೂರುಗಳನ್ನು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸಿ, ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಸ್ಪರ್ಧಿಗಳು
- ವೀರಣ್ಣ ಚಿರಂತಿಮಠ – ಬಿಜೆಪಿ
- ಉಮಶ್ ಮೇಟಿ – ಕಾಂಗ್ರೆಸ್
ಮಾರ್ಚ್ 30ರಿಂದ ಎರಡು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಉಪ ಚುನಾವಣೆ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 4ರ ಬಳಿಕ 2ನೇ ಹಂತದಲ್ಲಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.
ಉಪ ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಚಿವರು, ಶಾಸಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಬಿಜೆಪಿ ಸಹ ಉಪ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದ್ದು, ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

